ADVERTISEMENT

ಬೆಂಗಳೂರು: ಭಾರಿ ಕುಳಗಳ ಮನೆ ಮೇಲೆ ಎಸಿಬಿ ದಾಳಿ

₹ 100 ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 20:59 IST
Last Updated 22 ಜೂನ್ 2020, 20:59 IST
ಎಸಿಬಿ- ಸಾಂಕೇತಿಕ ಚಿತ್ರ
ಎಸಿಬಿ- ಸಾಂಕೇತಿಕ ಚಿತ್ರ   

ಬೆಂಗಳೂರು: ಭಾರಿ ಹಣಕಾಸು ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಅಧಿಕ ಮೊತ್ತದ ಸಾಲ ಪಡೆದು ಪಾವತಿಸದೆ ವಂಚಿಸಿದ್ದಾರೆನ್ನಲಾದ ಮೂವರು ‘ಭಾರಿ ಕುಳ’ಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಬ್ಯಾಂಕಿನಿಂದ ₹ 100 ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ ಎನ್ನಲಾದ ಸಿನಿಮಾ ನಿರ್ಮಾಪಕ ರಘುನಾಥ್‌ ಅವರ ಯಶವಂತಪುರ ಬ್ರಿಗೇಡ್‌ ಗೇಟ್‌ವೇಯಲ್ಲಿರುವ ಫ್ಲ್ಯಾಟ್‌, ಎಚ್‌ಆರ್‌ಬಿಆರ್‌ ಬಡಾವಣೆಯ ಗಣೇಶ್‌ ಬ್ಲಾಕ್‌ನಲ್ಲಿರುವ ಉದ್ಯಮಿ ಜಸ್ವಂತ್‌ ರೆಡ್ಡಿಯವರ ಮನೆ ಹಾಗೂ ₹ 48 ಕೋಟಿ ಸಾಲ ಪಡೆದಿದ್ದಾರೆನ್ನಲಾದ ರಾಮಕೃಷ್ಣ ಎಂಬುವರ ಚಿಕ್ಕಲಸಂದ್ರ ರಾಮಾಂಜನೇಯ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕಾಗದ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ.

ರಘುನಾಥ್‌ ಅವರು ಸುದೀಪ್‌ ನಟನೆಯ ‘ಹೆಬ್ಬುಲಿ’ ಸಿನಿಮಾ ನಿರ್ಮಿಸಿದ್ದು, ಹೊಟೇಲ್‌ ನಿರ್ಮಾಣಕ್ಕಾಗಿ ಸಾಲ ಪಡೆದಿದ್ದಾರೆ. ರಾಮಕೃಷ್ಣ ರಿಯಲ್‌ ಎಸ್ಟೇಟ್‌ ಉದ್ಯಮಿ ಆಗಿದ್ದಾರೆ. ಜಸ್ವಂತ್‌ರೆಡ್ಡಿ ಅವರು ‘ಮೆಗಾಟೆಕ್‌’ ಕಂಪನಿ ಪಾಲುದಾರರು ಎಂದು ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ನಕಲಿ ಖಾತೆಗಳ ಮೂಲಕ ಸಾಲ ಪಡೆದಿದ್ದ ಮೂವರು ಬ್ಯಾಂಕಿನಲ್ಲೇ ಬೇರೆ ಬೇರೆ ಖಾತೆಗಳನ್ನು ತೆರೆದು ಸಾಲ ಮಂಜೂರು ಮಾಡಿಸಿಕೊಂಡು ಅದನ್ನು ಹಳೇ ಸಾಲಕ್ಕೆ ಜಮಾ ಮಾಡಿಸುವ ಮೂಲಕ ಬ್ಯಾಂಕಿಗೆ ವಂಚಿಸುತ್ತಿದ್ದರು. ಬ್ಯಾಂಕ್‌ ನೀಡಿದ್ದ ದೊಡ್ಡ ಮೊತ್ತದ ಸಾಲ ವಸೂಲಾಗದೆ ಎನ್‌ಪಿಎ ಆಗಿತ್ತು ಎಂದು ಎಸಿಬಿ ಸ್ಪಷ್ಟಪಡಿಸಿದೆ.

ಇದೇ 18ರಂದು ಎಸಿಬಿ ಅಧಿಕಾರಿಗಳು ವಾಸುದೇವ ಮಯ್ಯ, ಬ್ಯಾಂಕಿನ ಹಿಂದಿನ ಅಧ್ಯಕ್ಷ ರಾಮಕೃಷ್ಣ ಅವರ ಮನೆ, ಶ್ರೀ ಗುರುರಾಘವೇಂದ್ರ ಬ್ಯಾಂಕಿನ ಪ್ರಧಾನ ಕಚೇರಿ, ಬಸವನಗುಡಿ ಶಾಖೆ, ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸಂಘ ಸೇರಿದಂತೆ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ, ಜಸ್ವಂತ್‌ರೆಡ್ಡಿ, ರಂಜಿತಾರೆಡ್ಡಿ, ಅಶೋಕರೆಡ್ಡಿ, ನವೀನ್‌ ಡಿ.ಪಿ, ಗೀತಾ ನವೀನ್‌ ಮತ್ತಿತರರ ಜತೆಗೂಡಿ ಬ್ಯಾಂಕಿನ ಸಿಇಒ ಆಗಿದ್ದ ವಾಸುದೇವ ಮಯ್ಯ ಭದ್ರತೆ ಪಡೆಯದೆ ಸಾಲ ನೀಡಿ ದ್ರೋಹವೆಸಗಿದ್ದಾರೆ ಎಂದು ಮುಖ್ಯ ಸಿಇಒ ಸಂತೋಷ್‌ ಕುಮಾರ್‌ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.