ADVERTISEMENT

ಎಸಿಬಿ: ದಾಳಿ ಮಾಡಿದರಷ್ಟೇ ಸಾಕೆ -ಹೋರಾಟಗಾರರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:31 IST
Last Updated 22 ಮಾರ್ಚ್ 2022, 19:31 IST
ಎಸಿಬಿ
ಎಸಿಬಿ    

ಬೆಂಗಳೂರು: ಭ್ರಷ್ಟರ ವಿರುದ್ಧ ದಾಳಿ ನಡೆಸುವ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು, ಭ್ರಷ್ಟರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲರಾಗುತ್ತಿದ್ದಾರೆ.

ದಾಖಲಾದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಆಗುತ್ತಿರುವ ಪ್ರಮಾಣ ತೀರಾ ಕಡಿಮೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ತನಿಖಾ ವಿಧಾನವನ್ನು ಸಮರ್ಪಕವಾಗಿ ಅನುಸರಿಸದೆ, ನ್ಯಾಯಾಲಯದಲ್ಲಿ ಸಮರ್ಪಕವಾಗಿ ವಾದ ಮಂಡನೆ ಮಾಡದಿರುವುದೇ ಶಿಕ್ಷೆ ಪ್ರಮಾಣ ಕಡಿಮೆ ಆಗಲು ಕಾರಣವಾಗುತ್ತಿದೆ. ಎಸಿಬಿ ಎಂದರೆ ದಾಳಿಗಷ್ಟೇ ಸೀಮಿತವೇ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಹೋರಾಟಗಾರರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಇಡೀ ವ್ಯವಸ್ಥೆ ಭ್ರಷ್ಟವಾಗಿದೆ’
ಈಗ ಎಸಿಬಿ ಮತ್ತು ಈ ಹಿಂದೆ ಲೋಕಾಯುಕ್ತ ಸಂಸ್ಥೆ ದಾಖಲು ಮಾಡಿರುವ ಬಹುತೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆ ಆಗಿಲ್ಲ. ಅದಕ್ಕೆ ಪ್ರಮುಖ ಕಾರಣ ಆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ವಕೀಲರ ಅದಕ್ಷತೆ, ನಿರಾಸಕ್ತಿ ಮತ್ತು ಭ್ರಷ್ಟಾಚಾರ. ಈ ಸಂಸ್ಥೆಗಳ ವಕೀಲರಲ್ಲಿ ಸರ್ಕಾರಿ ಕೆಲಸ ಎನ್ನುವ ಬೇಜವಾಬ್ದಾರಿ ಇದೆ. ಅವರಲ್ಲಿ ಬಹುತೇಕರು ಪ್ರಭಾವಗಳ ಮೂಲಕ ಎಸಿಬಿ ಅಥವ ಲೋಕಾಯುಕ್ತ ಸಂಸ್ಥೆಗೆ ತಾತ್ಕಾಲಿಕವಾಗಿ ನಿಯೋಜನೆ ಆಗಿರುತ್ತಾರೆ. ಕಾಲಕಾಲಕ್ಕೆ ಅವರ ಕಾರ್ಯಕ್ಷಮತೆಯ ವಿಶ್ಲೇಷಣೆ ನಡೆಯುವುದೂ ಅನುಮಾನ. ದೋಷಾರೋಪ ಪಟ್ಟಿ ಸಿದ್ಧಪಡಿಸುವ ತನಿಖಾ ಹಂತದಲ್ಲಿಯೇ ಎಸಿಬಿ ಅಧಿಕಾರಿಗಳೂ ಪ್ರಭಾವಕ್ಕೆ ಒಳಗಾಗಿ ಅಥವಾ ಲಂಚ ಪಡೆದು ಮೊಕದ್ದಮೆ ದುರ್ಬಲಗೊಳಿಸುವ ಸಾಧ್ಯತೆಗಳೂ ಇವೆ. ನ್ಯಾಯಾಲಯಗಳೂ ವೇಗವಾಗಿ ಕೆಲಸ ಮಾಡದೆ ಸಾಕ್ಷಿಗಳು ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತಿದೆ. ಒಟ್ಟಾರೆ ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಒಬ್ಬರನ್ನು ದೂಷಿಸಿ ಉಪಯೋಗವಿಲ್ಲದ ಸಂದರ್ಭ ಇದಾಗಿದೆ.

ADVERTISEMENT

–ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ

**

‘ಎಸಿಬಿ ರದ್ದುಪಡಿಸುವುದೇ ಸೂಕ್ತ’

ಎಸಿಬಿಯನ್ನು ಮುಂದುವರಿಸುವ ಬದಲು ರದ್ದು ಮಾಡುವುದೇ ಸೂಕ್ತ. ಲೋಕಾಯುಕ್ತಕ್ಕೆ ಇದ್ದ ಪೊಲೀಸ್ ಅಧಿಕಾರವನ್ನು ರದ್ದುಪಡಿಸಿದ್ದೇ ದೊಡ್ಡ ಪ್ರಮಾದ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ದೊಡ್ಡ ತಪ್ಪು ಇದು. ಆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ವ್ಯವಸ್ಥೆಯೇ ಹಿಮ್ಮುಖವಾಯಿತು. ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಅಡಿಯಲ್ಲಿ ಕೆಲಸ ಮಾಡುವ ಎಸಿಬಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲು ಸಾಧ್ಯವೇ. ಎಸಿಬಿ ದಾಳಿಗೆ ಒಳಗಾದವರಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ ಎಂದು ನೋಡಿದರೆ ಅತ್ಯಂತ ಕಡಿಮೆ. ಈ ರೀತಿ ಕಾರ್ಯನಿರ್ವಹಿಸುವ ಬದಲು ಎಸಿಬಿಯನ್ನೇ ರದ್ದು ಮಾಡುವುದು ಸೂಕ್ತ. ಅದರ ಬದಲಿಗೆ ಈ ಹಿಂದಿನಂತೆ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು. ಸ್ವತಂತ್ರ ತನಿಖಾ ಸಂಸ್ಥೆಯಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಯಾವುದೇ ಪ್ರಭಾವಕ್ಕೂ ಒಳಗಾಗದೆ ಲೋಕಾಯುಕ್ತ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಖಾಲಿ ಇರುವ ಲೋಕಾಯುಕ್ತ ಸ್ಥಾನಕ್ಕೆ ಕೂಡಲೇ ನೇಮಕ ಮಾಡಬೇಕು.

–ಎಸ್‌.ಆರ್.ಹಿರೇಮಠ, ಸಮಾಜ ಪರಿವರ್ತನಾ ವೇದಿಕೆ ಅಧ್ಯಕ್ಷ

**

‘ತನಿಖಾ ವಿಧಾನವೇ ಗೊತ್ತಿಲ್ಲ’

ಎಸಿಬಿ ಅಧಿಕಾರಿಗಳಿಗೆ ತನಿಖಾ ವಿಧಾನ ಗೊತ್ತಿರಬೇಕಾಗುತ್ತದೆ. ಈ ಅಧಿಕಾರಿಗಳಿಗೆ ತನಿಖಾ ವಿಧಾನದ ತರಬೇತಿಯನ್ನೇ ನೀಡಿಲ್ಲ. ಸಾಕ್ಷ್ಯ ಸಂಗ್ರಹ ಹೇಗಿರಬೇಕು ಎಂಬುದೇ ಗೊತ್ತಿಲ್ಲ. ಅದಕ್ಕಿರುವ ಪ್ರಕ್ರಿಯೆಗಳನ್ನೇ ಅನುಸರಿಸುವುದಿಲ್ಲ. ಆದ್ದರಿಂದ ಎಸಿಬಿ ದಾಖಲಿಸುವ ಪ್ರಕರಣಗಳು ನ್ಯಾಯಾಲಯದಲ್ಲಿ ನಿಲ್ಲುತ್ತಿಲ್ಲ. ಮೊದಲನೆಯದಾಗಿ ಶಿಕ್ಷೆ ಕೊಡಿಸುವ ಮನಸ್ಥಿತಿಯೇ ಎಸಿಬಿ ಅಧಿಕಾರಿಗಳಿಗೆ ಇರುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಸಂಸ್ಥೆ ಇದೆ ಎಂದು ತೋರಿಸಿಕೊಳ್ಳಲಷ್ಟೇ ದಾಳಿಗಳು ನಡೆಯುತ್ತಿವೆ. ದಾಳಿಗೆ ಒಳಗಾದವರಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಶಿಕ್ಷೆ ಆಗಿದ್ದರೆ ವ್ಯವಸ್ಥೆ ಸುಧಾರಿಸಿ ಭ್ರಷ್ಟಾಚಾರ ಕಡಿಮೆಯಾಗುತ್ತಿತ್ತು. ತನಿಖೆಗೆ ಅಭಿಯೋಜನಾ ಮಂಜೂರಾತಿ ಪಡೆಯಬೇಕು ಎಂಬ ವ್ಯವಸ್ಥೆಯನ್ನು ಮೊದಲು ಕೈಬಿಡಬೇಕು. ಈ ಸೆಕ್ಷನ್ ತೆಗೆಯುವ ತನಕ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಭ್ರಷ್ಟಾಚಾರಕ್ಕೆ ರಕ್ಷಣೆ ಇದೆ, ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಈ ವ್ಯವಸ್ಥೆ ಬದಲಾಗಬೇಕು.

–ಆದರ್ಶ ಅಯ್ಯರ್, ಜನಾಧಿಕಾರ ಸಂಘರ್ಷ ಪರಿಷತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.