ADVERTISEMENT

ಅಪಘಾತ: ಬಿಬಿಎಂಪಿ ನೌಕರ ಸೇರಿ ಇಬ್ಬರ ಸಾವು

ಪ್ರತ್ಯೇಕ ಅಪಘಾತ: ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 19:45 IST
Last Updated 5 ನವೆಂಬರ್ 2022, 19:45 IST
   

ಬೆಂಗಳೂರು: ನಗರದ ಎರಡು ಕಡೆ ಶನಿವಾರ ಅಪಘಾತ ಸಂಭವಿಸಿದ್ದು, ಬಿಬಿಎಂಪಿ ನೌಕರ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತ ಸಂಬಂಧ ಕೆಎಸ್‌ಆರ್‌ಟಿಸಿ ಬಸ್‌ಗಳ ಇಬ್ಬರು ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

‘ಮುನಿಯಪ್ಪ ಗಾರ್ಡನ್ ನಿವಾಸಿ ಶ್ರೀಧರ್ (52) ಹಾಗೂ ರಮೇಶ್ (30) ಮೃತರು. ಇವರಿಬ್ಬರು ಪ್ರತ್ಯೇಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಟಿದ್ದರು. ಇದೇ ವೇಳೆಯೇ ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಕ್ಕಿ ಹೊಡೆದು ಅವಘಢ ಸಂಭವಿಸಿದೆ. ಹಲಸೂರು ಗೇಟ್ ಹಾಗೂ ರಾಜಾಜಿನಗರ ಸಂಚಾರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಚಾಲಕರಿಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಲೆಗೆ ಪೆಟ್ಟು ಬಿದ್ದು ಸಾವು: ‘ಬಿಬಿಎಂಪಿ ನೌಕರ ಶ್ರೀಧರ್, ರಾಜಾಜಿನಗರ ಭಾಷ್ಯಂ ವೃತ್ತದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಹಲಸೂರು ಗೇಟ್ ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಶ್ರೀಧರ್ ಅವರು ಕೆಲಸದ ನಿಮಿತ್ತ ಶನಿವಾರ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಕೆ.ಜಿ.ರಸ್ತೆ ಮೂಲಕ ವಾಪಸು ಹೊರಟಿದ್ದರು. ತಿರುಪತಿಯಿಂದ ಬೆಂಗಳೂರಿಗೆ ಬಂದಿದ್ದ ಕೆಎಸ್‌ಆರ್‌ಟಿಸಿ ಬಸ್ ಇದೇ ಮಾರ್ಗದಲ್ಲಿ ತೆರಳುತ್ತಿತ್ತು. ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಬಸ್, ದ್ವಿಚಕ್ರ ವಾಹನಕ್ಕೆ ಗುದ್ದಿತ್ತು.’

‘ವಾಹನ ಸಮೇತ ರಸ್ತೆಯಲ್ಲಿ ಉರುಳಿ ಬಿದ್ದಿದ್ದ ಶ್ರೀಧರ್ ಅವರ ತಲೆಗೆ ಪೆಟ್ಟಾಗಿತ್ತು. ಅವರನ್ನು ಸೇಂಟ್‌ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು’ ಎಂದು ಪೊಲೀಸರು ತಿಳಿಸಿದರು.

ಖಾಸಗಿ ಕಂಪನಿ ಉದ್ಯೋಗಿ: ಇನ್ನೊಂದು ಪ್ರಕರಣದಲ್ಲಿ ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳೀಯ ನಿವಾಸಿ ರಮೇಶ್ ಮೃತಪಟ್ಟಿದ್ದಾರೆ.

‘ಖಾಸಗಿ ಕಂಪನಿ ಉದ್ಯೋಗಿ ರಮೇಶ್, ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಶನಿವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಮನೆಯತ್ತ ಹೊರಟಿದ್ದರು. ನವರಂಗ್ ಚಿತ್ರಮಂದಿರ ಸಮೀಪದಲ್ಲಿ ಅವರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದರು’ ಎಂದು ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.