
ಬಂಧನ
ಬೆಂಗಳೂರು: ಕೆಲಸ ಮಾಡುತ್ತಿದ್ದ ಚಿನ್ನಾಭರಣ ಮಳಿಗೆ ಮಾಲೀಕರಿಗೆ ವಂಚಿಸಿದ ವ್ಯಕ್ತಿಯನ್ನು ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಈತನಿಂದ ₹33.50 ಲಕ್ಷ ಮೌಲ್ಯದ 230 ಗ್ರಾಂ ತೂಕದ ಆರು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಪಿಎಚ್ ಜುಮಾ ಮಸೀದಿ ರಸ್ತೆಯಲ್ಲಿರುವ ಆಭರಣ ಅಂಗಡಿ ಮಾಲೀಕರು ಸೆಪ್ಟೆಂಬರ್ 23ರಂದು ಈ ಬಗ್ಗೆ ದೂರು ನೀಡಿದ್ದರು.
ಆಭರಣ ಅಂಗಡಿಗೆ ಮಾಲೀಕರು ಮತ್ತೊಂದು ಆಭರಣ ಅಂಗಡಿಯಿಂದ ಚಿನ್ನಾಭರಣ ತರಲು ಆರೋಪಿಯನ್ನು ಕಳುಹಿಸಿದ್ದರು. ಅಂಗಡಿಯಿಂದ ಏಳು ಸರಗಳನ್ನು ತೆಗೆದುಕೊಂಡು ಕೆಲಸ ಮಾಡುತ್ತಿದ್ದ ಅಂಗಡಿಗೆ ಹೋಗದೆ ಆರೋಪಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಖಚಿತ ಮಾಹಿತಿ ಮೇರೆಗೆ ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕೃತ್ಯವೆಸಗಿರುವುದು ಗೊತ್ತಾಗಿದೆ. ಆತನಿಂದ ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.