ADVERTISEMENT

ಪರಸ್ತ್ರೀ ಜೊತೆ ಮಾತನಾಡಿದ್ದಕ್ಕೆ ಪತಿ ಮುಖಕ್ಕೆ ಆ್ಯಸಿಡ್ !

ತಿಲಕನಗರ ಪೊಲೀಸರಿಂದ ಆರೋಪಿ ಫರ್ವಿನಾ ಬಂಧನ * ಪ್ರೀತಿಸಿ ಮದುವೆಯಾಗಿದ್ದ ದಂಪತಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:38 IST
Last Updated 28 ಏಪ್ರಿಲ್ 2019, 20:38 IST

ಬೆಂಗಳೂರು: ಪರಸ್ತ್ರೀ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕಾಗಿ ಮೊಹಮ್ಮದ್ ಅತೀಮ್ (35) ಎಂಬುವರ ಮುಖಕ್ಕೆ, ಅವರ ಪತ್ನಿ ಅಕ್ಸಾ ಫರ್ವಿನಾ (34) ಎಂಬುವರೇ ಆ್ಯಸಿಡ್‌ ಎರಚಿರುವ ಘಟನೆಜಯನಗರದಲ್ಲಿ ನಡೆದಿದೆ.

ತೀವ್ರ ಗಾಯಗೊಂಡಿರುವ ಮೊಹಮ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನೀಡಿರುವ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಅಕ್ಸಾ ಫರ್ವಿನಾ ಅವರನ್ನು ಭಾನುವಾರ ಬಂಧಿಸಿದ್ದಾರೆ.

‘ಕ್ಷುಲ್ಲಕ ಕಾರಣಕ್ಕಾಗಿ ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಏಪ್ರಿಲ್ 24ರಂದು ಜಗಳ ವಿಕೋಪಕ್ಕೆ ಹೋಗಿತ್ತು. ಫರ್ವಿನಾ, ಮೊದಲೇ ತಂದಿಟ್ಟುಕೊಂಡಿದ್ದ ಆ್ಯಸಿಡ್‌ ಅನ್ನು ಪತಿ ಮೊಹಮ್ಮದ್ ಮೇಲೆ ಎರಚಿದ್ದಳು’ ಎಂದು ತಿಲಕನಗರ ಪೊಲೀಸರು ಹೇಳಿದರು.

ADVERTISEMENT

ಪ್ರೀತಿಸಿ ಮದುವೆ: ‘ಮೊಹಮ್ಮದ್ ಅತೀಮ್ ಅವರ ಮೂಲ ಹೆಸರುಎನ್.ಎಸ್.ಶಾಂತರಾಜು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಸಹೋದ್ಯೋಗಿ ಫರ್ವಿನಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ನಂತರ ತಮ್ಮ ಹೆಸರನ್ನು ಮೊಹಮ್ಮದ್ ಎಂದು ಬದಲಾಯಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಅವರಿಬ್ಬರು 2006ರ ಆಗಸ್ಟ್‌ 25ರಂದು ಜಯನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದರು.ಈ ಅಂತರಧರ್ಮೀಯ ವಿವಾಹಕ್ಕೆ ಇಬ್ಬರ ಪೋಷಕರೂ ವಿರೋಧ ವ್ಯಕ್ತಪಡಿಸಿದ್ದರು. ದಂಪತಿಯು ಜಯನಗರ ಟಿ. ಬ್ಲಾಕ್‌ನಲ್ಲಿ ವಾಸವಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ.’

‘ಪತ್ನಿ ಬೇರೆ ಯುವಕನ ಜೊತೆ ಸಲುಗೆ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಿಸಿದ್ದ ಮೊಹಮ್ಮದ್, ತಲಾಖ್‌ ನೀಡಿದ್ದರು. ಆ ಬಳಿಕವೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಮೊಹಮ್ಮದ್, ಬೇರೆ ಮಹಿಳೆಯ ಜೊತೆ ಮೊಬೈಲ್‌ನಲ್ಲಿ ಆಗಾಗ ಮಾತನಾಡುತ್ತಿದ್ದರು. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿತ್ತು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.