ADVERTISEMENT

ಸಿಸಿಬಿ ಅಧಿಕಾರಿಗಳ ಪರ ಕೆಲ ಸಚಿವರ ಲಾಬಿ: ಎಫ್‌ಐಆರ್‌ ದಾಖಲಿಸಲು ಒಪ್ಪಿಗೆ?

ಲಾಬಿಗೆ ಸೊಪ್ಪು ಹಾಕದ ಸರ್ಕಾರ

ಹೊನಕೆರೆ ನಂಜುಂಡೇಗೌಡ
Published 19 ಮೇ 2020, 1:36 IST
Last Updated 19 ಮೇ 2020, 1:36 IST
ಪ್ರವೀಣ್ ಸೂದ್
ಪ್ರವೀಣ್ ಸೂದ್   

ಬೆಂಗಳೂರು: ಸಿಗರೇಟ್‌ ವಿತರಕರು ಹಾಗೂ ನಕಲಿ ಮಾಸ್ಕ್‌ ತಯಾರಿಕಾ ಕಂಪನಿಗಳಿಂದ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನ ಕುಮಾರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಪಿ.ಸಿ. ಆ್ಯಕ್ಟ್‌) ಅಡಿ ಎಫ್‌ಐಆರ್‌ ದಾಖಲಿಸದಂತೆ ಹೇರಿದ ರಾಜಕೀಯ ಒತ್ತಡಗಳಿಗೆ ರಾಜ್ಯ ಸರ್ಕಾರ ಸೊಪ್ಪು ಹಾಕಿಲ್ಲ ಎನ್ನಲಾಗಿದೆ.

ಮೂವರೂ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಒಪ್ಪಿಗೆ ಕೊಡುವಂತೆ ಕೇಳಿ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಗೃಹ ಇಲಾಖೆ, ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಅವರಿಗೆ ಪ್ರತ್ಯೇಕ ಪತ್ರ ಬರೆದಿತ್ತು. ಸೂದ್‌ ಅವರೇ ಪ್ರಕರಣದ ತನಿಖೆ ನಡೆಸುವಂತೆ ಎಸಿಬಿಗೆ ಇದಕ್ಕೂ ಮೊದಲು ಸೂಚಿಸಿದ್ದರು.

‘ಆಡಳಿತ ಪಕ್ಷದ ಕೆಲ ಸಚಿವರು, ಶಾಸಕರು, ಯಾವುದೇ ಪರಿಸ್ಥಿತಿಯಲ್ಲಿ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ಹಾಕಲು ಅನುಮತಿ ನೀಡಬಾರದು ಎಂದು ಒತ್ತಡ ಹೇರಿದ್ದರು. ಇದಕ್ಕೆ ಸರ್ಕಾರ ಕಿವಿಗೊಟ್ಟಿಲ್ಲ. ಎಸಿಬಿ ಪತ್ರಕ್ಕೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಒಪ್ಪಿಗೆ ನೀಡಿದ್ದಾರೆ.

ADVERTISEMENT

‘ಕಡತ ಸದ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಅಂಗಳದಲ್ಲಿದೆ’ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಎಫ್‌ಐಆರ್‌ ದಾಖಲಿಸಲು ಅನುಮತಿ ಕೊಡದಿದ್ದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಈಗಾಗಲೇ ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ. ಆರೋಪಿ ಅಧಿಕಾರಿಗಳ ಬಳಿ ಹಣ ಸಿಕ್ಕಿದೆ’ ಎಂದು ಬಸವರಾಜ ಬೊಮ್ಮಾಯಿ ಅವರು, ಸಚಿವರು ಮತ್ತು ಶಾಸಕರಿಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ, ಅವರೂ ಒಪ್ಪಿಗೆ ಕೊಡುವುದು ನಿಶ್ಚಿತ ಎಂದೂ ಮೂಲಗಳು ವಿವರಿಸಿವೆ.

ಭ್ರಷ್ಟಾಚಾರನಿಯಂತ್ರಣ ಕಾಯ್ದೆ ಸೆಕ್ಷನ್‌ 17 (ಎ) ಅನ್ವಯ ಯಾವುದೇ ಸರ್ಕಾರಿ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಟಾಯ. ಲಾಕ್‌ಡೌನ್‌ ಸಮಯದಲ್ಲಿ ಅಕ್ರಮ ಸಿಗರೇಟ್‌ ಮಾರಾಟಕ್ಕೆ ತೊಂದರೆ ಆಗದಂತೆ ಅವಕಾಶ ಮಾಡಿಕೊಡಲು ಎಂ.ಡಿ. ಆ್ಯಂಡ್‌ ಸನ್ಸ್‌, ಮಹಾವೀರ್‌ ಟ್ರೇಡರ್ಸ್‌ ಮತ್ತಿತರ ವಿತರಕರಿಂದ ₹ 85 ಲಕ್ಷ ಲಂಚ ಪಡೆದ ಆರೋಪಕ್ಕೆ ಒಂದು ಪ್ರಕರಣ ಸಂಬಂಧಿಸಿದೆ. ಇನ್ನೊಂದು, ಎನ್‌ 95 ನಕಲಿ ಮಾಸ್ಕ್‌ತಯಾರಿಕಾ ಕಂಪನಿಯಿಂದ ₹15
ಲಕ್ಷ ಲಂಚ ಪಡೆದ ಪ್ರಕರಣವಾಗಿದೆ.

ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಒಪ್ಪಿಗೆ ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ ಎಂದು ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಪ್ರಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.