ADVERTISEMENT

ಎನ್‌ಸಿಬಿ ಕಾರ್ಯಾಚರಣೆ: ಸಿನಿಮಾ ನಟ, ಸಂಗೀತ ನಿರ್ದೇಶಕರೇ ‘ಡ್ರಗ್ಸ್’ ಗ್ರಾಹಕರು !

ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 13:20 IST
Last Updated 27 ಆಗಸ್ಟ್ 2020, 13:20 IST
ಜಪ್ತಿ ಮಾಡಲಾದ ಡ್ರಗ್ಸ್ (ಒಳ ಚಿತ್ರದಲ್ಲಿ)
ಜಪ್ತಿ ಮಾಡಲಾದ ಡ್ರಗ್ಸ್ (ಒಳ ಚಿತ್ರದಲ್ಲಿ)   

ಬೆಂಗಳೂರು: ನಗರವನ್ನೇ ಕೇಂದ್ರವಾಗಿಸಿಕೊಂಡು ನಡೆಯುತ್ತಿದ್ದ ‘ಡ್ರಗ್ಸ್’ ಜಾಲ ಬಯಲಾಗಿದ್ದು, ಸ್ಯಾಂಡಲ್‌ವುಡ್ ಸಿನಿಮಾ‌ ನಟರು ಹಾಗೂ ಸಂಗೀತ ನಿರ್ದೇಶಕರೇ “ಡ್ರಗ್ಸ್‌’ ಕಾಯಂ ಗ್ರಾಹಕರಾಗಿದ್ದ ಸಂಗತಿ ಹೊರಬಿದ್ದಿದೆ.

ಬೆಂಗಳೂರಿನ ಕಲ್ಯಾಣನಗರದಲ್ಲಿರುವ ‘ರಾಯಲ್ ಸೂಟ್ಸ್ ಹೋಟೆಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ಲ್ಯಾಟೊಂದರ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ) ಅಧಿಕಾರಿಗಳು ಆಗಸ್ಟ್ 21ರಂದು ದಾಳಿ ಮಾಡಿದ್ದು, ‘ಡ್ರಗ್ಸ್‌’ ಜಾಲ ಕಿಂಗ್‌ಪಿನ್ ಆಗಿದ್ದ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ. ಅವರಿಂದ 145 ಡ್ರಗ್ಸ್‌ ಮಾತ್ರೆಗಳು ಹಾಗೂ ₹ 2.20 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

‘ಡಿ. ಅನಿಕಾ, ಮೊಹಮ್ಮದ್ ಅನೂಪ ಹಾಗೂ ರಾಜೇಶ್ ರವೀಂದ್ರನ್ ಬಂಧಿತ ಆರೋಪಿಗಳು. ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲೇ ಮಾತ್ರೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪಿಗಳು, ಕಾಯಂ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ ಡ್ರಗ್ಸ್ ಸಮೇತವೇ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದೂ ಹೇಳಿದರು.

ADVERTISEMENT

ಸ್ಯಾಂಡಲ್‌ವುಡ್‌ನಲ್ಲಿ ‘ಡ್ರಗ್ಸ್’ ವ್ಯಸನಿಗಳು:ಬಂಧಿತ ಆರೋಪಿ ಅನಿಕಾ, ಡ್ರಗ್ಸ್ ವ್ಯಸನಿಗಳಾಗಿರುವ ಸ್ಯಾಂಡಲ್‌ವುಡ್‌ನ ಕೆಲ ನಟರು ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಸಂಗತಿಯನ್ನು ಬಾಯ್ಬಿಟ್ಟಿದ್ದಾಳೆ. ಆಕೆ ಹೇಳಿಕೆಯಂತೆ ಎನ್‌ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

‘ನಟರು ಹಾಗೂ ಸಂಗೀತ ನಿರ್ದೇಶಕರು ಮಾತ್ರವಲ್ಲದೇ ಶ್ರೀಮಂತರು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ಲ್ಯಾಟ್‌ನಲ್ಲಿ 96 ಎಂಡಿಎಂಎನ್, 180 ಎಲ್‌ಎಸ್‌ಡಿ ನಿಕ್ಕೋ ಮಾತ್ರೆಗಳು ಸಿಕ್ಕಿವೆ. ಪ್ರಮುಖ ಆರೋಪಿ ಅನಿಕಾ ನೀಡಿದ್ದ ಮಾಹಿತಿಯಂತೆ, ಬೆಂಗಳೂರಿನ ದೊಡ್ಡಗುಬ್ಬಿಯ ಮನೆಯೊಂದರ ಮೇಲೆ ದಾಳಿ ಮಾಡಲಾಯಿತು. ಅಲ್ಲಿಯೂ 270 ಎಂಡಿಎಂಎ ಮಾತ್ರೆಗಳು ಪತ್ತೆಯಾದವು’ ಎಂದೂ ತಿಳಿಸಿದರು.

‘ಗ್ರಾಹಕರ ಬೇಡಿಕೆಗೆ ತಕ್ಕಂತೆ ಇವುಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ಇದರ ಜೊತೆ ದೊಡ್ಡ ಜಾಲವೇ ಇರುವ ಅನುಮಾನವಿದೆ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.