ಬೆಂಗಳೂರು: ‘ಟಿಕ್-ಟಾಕ್’ ಮೂಲಕ ಅಶ್ಲೀಲವಾಗಿ ಕಮೆಂಟ್ ಮಾಡುವ ಕಿಡಿಗೇಡಿಗಳ ವಿರುದ್ಧ ಉತ್ತರ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ನಟಿಯೊಬ್ಬರು ದೂರು ನೀಡಿದ್ದಾರೆ.
ನಟಿ ಭೂಮಿಕಾ ನೀಡಿದ ದೂರಿನ ಮೇರೆಗೆ ಕೆಲ ಟಿಕ್-ಟಾಕ್ ಟ್ರೋಲ್‍ಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ನಂದಿನಿ ಲೇಔಟ್ ನಿವಾಸಿ ಯಾಗಿರುವ ಭೂಮಿಕಾ 2005ರಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು, ಕನ್ನಡ, ತುಳು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಕೆಲವು ದಿನಗಳಿಂದ ಟಿಕ್-ಟಾಕ್ ಟ್ರೋಲಿಗರು, ನನ್ನ ಉಡುಗೆ- ತೊಡುಗೆ ಕುರಿತು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಅನಿಮೆಟೆಡ್ ಚಿತ್ರಗಳನ್ನು ಸೃಷ್ಟಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಭೂಮಿಕಾ ದೂರು ನೀಡಿದ್ದಾರೆ.
‘ನಟಿಗೆ ಮಾ.1ರಿಂದ ಕಿರುಕುಳ ನೀಡುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕೆಲ ಟಿಕ್-ಟಾಕ್ ಖಾತೆದಾರರನ್ನು ಪತ್ತೆ ಹಚ್ಚಿದ್ದು, ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.