ADVERTISEMENT

ಬೆಂಗಳೂರು| ಉದ್ಯಮಿಯಿಂದ ಕಿರುಕುಳ: ವಿಚಾರಣೆಗೆ ಹಾಜರಾಗಲು ನಟಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 14:28 IST
Last Updated 17 ನವೆಂಬರ್ 2025, 14:28 IST
   

ಬೆಂಗಳೂರು: ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಎ.ವಿ.ಆರ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ವೆಂಕಟೇಶ್‌ರೆಡ್ಡಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಅ.10ರಂದು ರಾಜರಾಜೇಶ್ವರಿನಗರ ಠಾಣೆಗೆ ನಟಿ ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತೆ 78(2), 79, 352, 351(2), 3(5) ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಗೋವಿಂದರಾಜನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಶನಿವಾರ ಮುಂಜಾನೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅರವಿಂದ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಅಂದೇ ಸಂಜೆ ಜಾಮೀನು ಲಭಿಸಿದ್ದರಿಂದ ರೆಡ್ಡಿ ಅವರು ಬಿಡುಗಡೆ ಆಗಿದ್ದರು.

‘ಅರವಿಂದ್ ಅವರು ನನ್ನನ್ನು ಹಿಂಬಾಲಿಸುವುದು, ಲೊಕೇಷನ್‌ ಪರಿಶೀಲನೆ ಮಾಡುವುದು, ಫೋಟೊಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಕಿರುಕುಳ ನೀಡಿದ್ದಾರೆ. ಅಲ್ಲದೇ ತಂದೆ–ತಾಯಿಗೆ ಬೆದರಿಕೆ ಹಾಕಿದ್ದಾರೆ’ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದರು.

ADVERTISEMENT

‘ದೂರಿನಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಾವುದಾದರೂ ಪೂರಕ ದಾಖಲೆಗಳಿದ್ದರೆ ಸಲ್ಲಿಸುವಂತೆ ದೂರುದಾರೆಗೆ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.