ADVERTISEMENT

ಬಿಡಿಎ ಭೂ ವ್ಯಾಜ್ಯಗಳ ಇತ್ಯರ್ಥಕ್ಕೆ ಅದಾಲತ್

ನ್ಯಾಯಲಯವನ್ನು ಕೋರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:55 IST
Last Updated 28 ಮಾರ್ಚ್ 2023, 19:55 IST
   

ಬೆಂಗಳೂರು: ಸುಮಾರು 11 ಸಾವಿರ ಎಕರೆ ಜಾಗದ ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಾಲಯದಿಂದಲೇ ಅದಾಲತ್ ನಡೆಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಸ್ತಾವ ಸಲ್ಲಿಸಿದೆ.

ವಿವಿಧ ಬಡಾವಣೆಗಳ ನಿರ್ಮಾಣಕ್ಕಾಗಿ ಬಿಡಿಎ ಆಯಾ ಕಾಲಘಟ್ಟದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ಭೂ ಪರಿಹಾರ ಕಡಿಮೆಯಾಗಿದೆ ಎಂಬುದೂ ಸೇರಿದಂತೆ ಹಲವು ಕಾರಣಗಳಿಂದ ಭೂಮಾಲೀಕರು ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ವಿವಿಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೆಲ ಪ್ರಕರಣಗಳು ಮೂರ್ನಾಲ್ಕು ದಶಕಗಳಾದರೂ ಇತ್ಯರ್ಥವಾಗಿಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣಗಳಿಂದಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆ, ಭೂಮಾಲೀಕರಿಗೆ ಪರಿಹಾರ ದೊರಕಿಸಲು ವಿಳಂಬವಾಗುತ್ತಿದೆ. ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯದಿಂದಲೇ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡುವ ರೈತರಿಗೆ ಅವರದೇ ಜಮೀನಿನಲ್ಲಿ ಶೇ 40ರಂತೆ ಪರಿಹಾರಾರ್ಥ ನಿವೇಶನದ ಜಾಗ ಮೀಸಲಿಡಲಾಗುವುದು. ಒಂದು ವರ್ಷ ಕಾಲಾವಕಾಶ ನೀಡಲಾಗುವುದು. ಈ ಸಂಬಂಧ ಹಂಚಿಕೆಗೆ ಹೊಸ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೆಲ ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಿಡಿಎ ಕಟ್ಟುನಿಟ್ಟಿನ ಕ್ರಮಕೈಗೊಂಡ ಪರಿಣಾಮ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣದಿಂದ ಪ್ರಾಧಿಕಾರ ಖಾತೆಯಲ್ಲಿ ₹ 1,012 ಕೋಟಿ ಸಂಗ್ರಹವಾಗಿದೆ. 2020ರಿಂದ ಇಲ್ಲಿಯವರೆಗೂ ₹ 2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬಿಡಿಎ ಆಸ್ತಿ ಭೂಕಬಳಿಕೆದಾರರಿಂದ ವಶಪಡಿಸಿಕೊಳ್ಳಲಾಗಿದೆ. ಎರಡು ವರ್ಷಗಳಲ್ಲಿ ಬಿಡಿಎಯಿಂದ ವಿವಿಧ ಬಡಾವಣೆಗಳಲ್ಲಿ 3,735 ನಿವೇಶನಗಳ ಹರಾಜಿನಿಂದ ಪ್ರಾಧಿಕಾರಕ್ಕೆ ₹ 3,553 ಕೋಟಿ ಆದಾಯ ಬಂದಿದೆ. ಬಿಡಿಎನಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ಮಧ್ಯವರ್ತಿಗಳ ಜತೆಗೆ ಕೈಜೋಡಿಸಿ ಸಂಸ್ಥೆಗೆ ನಷ್ಟ ಮಾಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಸದಸ್ಯ ಶಾಂತರಾಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.