ADVERTISEMENT

ಪಹಣಿ ಲೋಪದೋಷ ಸರಿಪಡಿಸಲು ಅದಾಲತ್, ಪ್ರಯೋಜನ ಪಡೆಯಲು ರೈತರಿಗೆ ಸೂಚನೆ

‘ಪಹಣಿ ಕಲಂ 3 ಮತ್ತು 9 ತಿದ್ದುಪಡಿ ಆಂದೋಲನ’ದಲ್ಲಿ ರೈತರಿಂದ ಅರ್ಜಿ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 12:40 IST
Last Updated 3 ಸೆಪ್ಟೆಂಬರ್ 2018, 12:40 IST
ಐಬಸಾಪುರದಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್‌ನಲ್ಲಿ ರೈತರು ಅರ್ಜಿ ಸಲ್ಲಿಸಿದರು
ಐಬಸಾಪುರದಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್‌ನಲ್ಲಿ ರೈತರು ಅರ್ಜಿ ಸಲ್ಲಿಸಿದರು   

ವಿಜಯಪುರ: ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ತೆರಳಿ ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು, ರೈತರ ಭೂ ದಾಖಲೆಗಳಲ್ಲಿನ ಸಮಸ್ಯೆ ಬಗೆಹರಿಸಿಕೊಡಲು ಕಂದಾಯ ಅದಾಲತ್‌ ಹಮ್ಮಿಕೊಂಡಿದ್ದು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ (ಪ್ರಾಯೋಗಿಕ) ಮಮತಾದೇವಿ ಹೇಳಿದರು.

ಐಬಸಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಕಂದಾಯ ಅದಾಲತ್’ ಹಾಗೂ ‘ಪಹಣಿ ಕಲಂ 3 ಮತ್ತು 9 ತಿದ್ದುಪಡಿ ಆಂದೋಲನ’ದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಭೂ ದಾಖಲೆಗಳ ಸಮಸ್ಯೆಗಳು, ಜಮೀನಿನ ಖಾತೆಗಳ ಪ್ರತ್ಯೇಕ ಪಹಣಿ (ಪೋಡಿ) ಮಾಡುವುದಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಹಾಜರು ಪಡಿಸಿದರೆ ಸ್ಥಳದಲ್ಲೇ ಸರಿಪಡಿಸಿ ಕೊಡಲಾಗುವುದು. ಇದಕ್ಕಾಗಿ ರೈತರು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಸರ್ಕಾರಿ ಸೇವೆಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಕಂದಾಯ ಅದಾಲತ್‌, ಜನ ಸ್ಪಂದನದಷ್ಟೇ ಪರಿಣಾಮಕಾರಿಯಾಗಿದ್ದು ರೈತರು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದರು.

ADVERTISEMENT

ರೈತರ ಪಹಣಿಗಳಲ್ಲಿ ಮೂರು ಹಾಗೂ ಒಂಬತ್ತನೇ ಕಾಲಂಗಳಿಗೆ ಸಂಬಂಧಪಟ್ಟಂತೆ ತಾಳೆಯಾಗದಿರುವ ತಿದ್ದುಪಡಿಗಳು, ಪಾವತಿ ಖಾತೆ, ವಿಭಾಗ ಖಾತೆ ಮುಂತಾದ ಸಮಸ್ಯೆಗಳನ್ನು ಸೂಕ್ತ ದಾಖಲೆಗಳನ್ನು ಒದಗಿಸಿದರೆ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲು ಅವಕಾಶವಿದೆ ಎಂದರು.

ಪ್ರಭಾರ ಉಪತಹಶೀಲ್ದಾರ್ ಚಿದಾನಂದ್ ಮಾತನಾಡಿ, ಸರ್ಕಾರ ಜಾರಿಗೆ ತರುವ ಎಲ್ಲ ಕಾರ್ಯಕ್ರಮಗಳಲ್ಲಿ ರೈತರು ಭಾಗವಹಿಸಿ, ಇಲ್ಲಿ ಸಿಗುವಂತಹ ಮಾಹಿತಿ ಪಡೆದುಕೊಳ್ಳುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದರಿಂದ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಹಣ ವ್ಯರ್ಥವಾಗುವುದಿಲ್ಲ, ಮಧ್ಯವರ್ತಿಗಳ ಹಾವಳಿಯೂ ಇರುವುದಿಲ್ಲ. ಸಾಕಷ್ಟು ರೈತರು, ಮಾಹಿತಿ ಇದ್ದರೂ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ ಎಂದರು.

ರಾಜಸ್ವ ನಿರೀಕ್ಷಕ ವೇಣುಗೋಪಾಲ್, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.