
ಬೆಂಗಳೂರು: ಜಿಬಿಎ – ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೌಕರರ ದೇಣಿಗೆಯೊಂದಿಗೆ ಜೀರ್ಣೋದ್ಧಾರ ಮಾಡಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಶುಕ್ರವಾರ ಉದ್ಘಾಟನೆಯಾಯಿತು.
ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಅರ್ಚಕರು, ಆಗಮ ಪಂಡಿತರಿಂದ ಜ.21ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಶತಚಂಡಿಕಯಾಗ ನಡೆಯಿತು. ನೊಣವಿನಕೆರೆ ಕಾಡಸಿದ್ದೇಶ್ವರ ಟ್ರಸ್ಟ್ ದೇವಸ್ಥಾನದ ಆನೆಯನ್ನು ದೇವತಾ ಕಾರ್ಯಕ್ಕೆ ಕರೆತರಲಾಗಿತ್ತು.
‘ಜಿಬಿಎ ಹಾಗೂ ಪಾಲಿಕೆ ನೌಕರರ ನೆರವಿನಿಂದ ಪುರಾತನ ದೇವಸ್ಥಾನಕ್ಕೆ ಹೊಸ ರೂಪ ಕೊಡಲಾಗಿದೆ. ಶುಕ್ರವಾರ ಸುಮಾರು ಐದು ಸಾವಿರ ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ತಿಳಿಸಿದರು.
ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯದ ಆವರಣದಲ್ಲಿ ಮಹಾಗಣಪತಿ, ಸಪ್ತಮಾತೃಕೆಯರು, ಕಾಶಿ ವಿಶ್ವನಾಥ ದಂಪತಿ ಸಮೇತ ಪೋತುರಾಜಸ್ವಾಮಿ, ವಲ್ಲಿ ದೇವಸೇನಾ ಸಮೇತ ಕಾರ್ತೀಕೇಯ, ಆಂಜನೇಯ, ಆದಿ ದೇವತೆಗಳು, ಅಷ್ಟ ದಿಕ್ಪಾಲಕರೊಂದಿಗೆ ನವಗ್ರಹ, ಶನಿ ಮಹಾತ್ಮ ದೇವರುಗಳಿದ್ದು, ಸೂರ್ಯ ಭಗವಾನ್ ಮತ್ತು ಕಾಲಭೈರವ ದೇವರ ಮೂರ್ತಿಯನ್ನು ಹೊಸದಾಗಿ ಸ್ಥಾಪಿಸಲಾಗಿದೆ.
ಜಿಬಿಎ ಕೇಂದ್ರ ಕಚೇರಿಯ ಆವರಣದಲ್ಲಿ ಮೂರು ದಿನ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲೆಡೆ ಹೂವಿನ ಅಲಂಕಾರ, ವಿದ್ಯುತ್ ದ್ವೀಪಗಳು ಸೇರಿದಂತೆ ವಿಶಿಷ್ಟ ರೀತಿಯಲ್ಲಿ ಕೋಟೆಯ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.