ADVERTISEMENT

ಆಳ್ವ ನ್ಯಾಯಾಂಗ ಬಂಧನಕ್ಕೆ; ಅಗರ್‌ವಾಲ್ ಕಸ್ಟಡಿಗೆ

ಡ್ರಗ್ಸ್ ಪ್ರಕರಣ; ಮತ್ತೊಬ್ಬ ಪೆಡ್ಲರ್ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 19:06 IST
Last Updated 18 ಜನವರಿ 2021, 19:06 IST

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಡಿ ಬಂಧಿಸಲಾಗಿದ್ದ ಆದಿತ್ಯ ಆಳ್ವ ಕಸ್ಟಡಿಗೆ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯನನ್ನು ಚೆನ್ನೈನಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಅವಧಿ ಮುಗಿದಿದ್ದರಿಂದ ಆತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಆತ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಆದಿತ್ಯ ಆಳ್ವ ವಿಚಾರಣೆ ವೇಳೆ ಯಾವುದೇ ಮಹತ್ವದ ಮಾಹಿತಿ ನೀಡಿಲ್ಲ. ತಲೆಮರೆಸಿಕೊಂಡಿದ್ದ ಆತನಿಗೆ ಯಾರೆಲ್ಲ ಸಹಕಾರ ನೀಡಿದ್ದರು ಎಂಬ ಬಗ್ಗೆಯೂ ಬಾಯ್ಬಿಟ್ಟಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ಆದಿತ್ಯ ಅಗರ್‌ವಾಲ್ ಕಸ್ಡಡಿಗೆ: ‘ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ದೆಹಲಿಯ ವಿರೇನ್ ಖನ್ನಾ ಜೊತೆ ಒಡನಾಟ ಹೊಂದಿ, ಡ್ರಗ್ಸ್ ಪಾರ್ಟಿ ಆಯೋಜನೆಗೆ ಸಹಕರಿಸಿದ್ದ ಆರೋಪದಡಿ ಆದಿತ್ಯ ಅಗರ್‌ವಾಲ್ ಎಂಬಾತನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಆದಿತ್ಯ ಅಗರ್‌ವಾಲ್‌ಗೆ ಇತ್ತೀಚೆಗಷ್ಟೇ ಜಾಮೀನು ಸಿಕ್ಕಿತ್ತು. ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸದ್ಯ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ವಿದೇಶಿ ಪ್ರಜೆ ಬಂಧನ: ‘ಪಾರ್ಟಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದಡಿ ವಿದೇಶಿ ಪ್ರಜೆ ಚಿಡಿಬೈರ್ ಆ್ಯಮರೋಸ್ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಕಾಗದ ಚೂರು ರೂಪದಲ್ಲಿದ್ದ 2 ಗ್ರಾಂ ಎಲ್‌ಎಸ್‌ಡಿ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಆದಿತ್ಯ ಆಳ್ವ ಹಲವು ಪೆಡ್ಲರ್ ಜೊತೆ ಒಡನಾಟ ಹೊಂದಿದ್ದ. ಅವರ ಮೂಲಕ ಡ್ರಗ್ಸ್ ತರಿಸಿ ಪಾರ್ಟಿಯಲ್ಲಿ ಹಂಚುತ್ತಿದ್ದ. ತನ್ನದೇ ರೆಸಾರ್ಟ್‌ನಲ್ಲಿ ಆತ ಹಲವು ಬಾರಿ ಪಾರ್ಟಿ ಮಾಡಿರುವ ಮಾಹಿತಿ ಇದೆ’ ಎಂದೂ ತಿಳಿಸಿವೆ.

‘ಇದೇ ಪ್ರಕರಣದಲ್ಲಿ ಪೆಡ್ಲರ್‌ಗಳಾದ ಲೂಮ್ ಪೆಪ್ಪರ್, ಚೀಫ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇದೀಗ ಚಿಡಿಬೈರ್ ಎಂಬಾತನನ್ನೂ ಸೆರೆ ಹಿಡಿಯಲಾಗಿದೆ. ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.