ADVERTISEMENT

ವಕೀಲರ ಕುಟುಂಬ ಬೆದರಿಸಿ ಸುಲಿಗೆ: ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:16 IST
Last Updated 7 ಡಿಸೆಂಬರ್ 2022, 16:16 IST
ಮಂಜೂರ್ ಅಹ್ಮದ್
ಮಂಜೂರ್ ಅಹ್ಮದ್   

ಬೆಂಗಳೂರು: ಕಾರಿನಲ್ಲಿ ಹೊರಟಿದ್ದ ವಕೀಲರ ಕುಟುಂಬವನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪದಡಿ ರೌಡಿ ಮಂಜೂರ್ ಅಹ್ಮದ್ ಅಲಿಯಾಸ್ ದುಂದು (38) ಎಂಬಾತನನ್ನು ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶಿವಾಜಿನಗರದ ಟಾಸ್ಕರ್ ಟೌನ್‌ ನಿವಾಸಿ ಮಂಜೂರ್, ಅಪರಾಧ ಹಿನ್ನೆಲೆಯುಳ್ಳವ. ಸುಲಿಗೆ, ಕಳ್ಳತನ, ಕೊಲೆ ಯತ್ನ, ವಂಚನೆ, ಅತ್ಯಾಚಾರ, ಕೋಮು ಗಲಭೆ ಸೇರಿದಂತೆ 25 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಈತನ ಹೆಸರು ಶಿವಾಜಿನಗರ ರೌಡಿ ಪಟ್ಟಿಯಲ್ಲಿತ್ತು’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ಹೇಳಿದರು.

‘ಸಿನಿಮಾ ನಟರೊಬ್ಬರ ಸಹಾಯಕನಾಗಿದ್ದ ಈತ, ಹಲವು ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿದ್ದ. ನಂತರ, ತನ್ನದೇ ತಂಡ ಕಟ್ಟಿಕೊಂಡಿದ್ದ. ಅಪರಾಧ ಕೃತ್ಯ ಎಸಗಿ ಅಕ್ರಮವಾಗಿ ಹಣ ಗಳಿಸಿ ಜೀವನ ಸಾಗಿಸುತ್ತಿದ್ದ’ ಎಂದು ತಿಳಿಸಿದರು.

ADVERTISEMENT

ವಕೀಲರನ್ನು ಗುರಿಯಾಗಿಸಿ ಕೃತ್ಯ: ‘ವಕೀಲ ಅಶ್ಫಕ್ ಅಹಮ್ಮದ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಮಂಗಳವಾರ ರಾತ್ರಿ ಕನಕನಗರಕ್ಕೆ ಕಾರಿನಲ್ಲಿ ಹೋಗಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಕಾರಿನ ಬಾಗಿಲನ್ನು ಒತ್ತಾಯದಿಂದ ತೆರೆದು ಅಶ್ಪಕ್, ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡಿದ್ದರು’ ಎಂದು ಡಿಸಿಪಿ ಹೇಳಿದರು.

‘ಪರ್ಸ್, ಮೊಬೈಲ್ ಕಿತ್ತುಕೊಂಡಿದ್ದ ಆರೋಪಿಗಳು, ವಕೀಲರ ಕುಟುಂಬವನ್ನು ಕಾರಿನಿಂದ ಹೊರಗೆ ತಳ್ಳಿದ್ದರು. ನಂತರ, ಅದೇ ಕಾರಿನಲ್ಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ನಂತರ, ಅಶ್ಫಕ್ ಠಾಣೆಗೆ ಮಾಹಿತಿ ನೀಡಿದ್ದರು.’

‘ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿಶೇಷ ತಂಡ, ಆರೋಪಿಯನ್ನು ಬಂಧಿಸಿದೆ. ₹14 ಲಕ್ಷ ಮೌಲ್ಯದ ಕಾರು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ರೌಡಿ ಮಂಜೂರ್, ವಕೀಲರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ. ಈತನ ತಂಡದಲ್ಲಿರುವ ಮತ್ತಷ್ಟು ಆರೋಪಿಗಳನ್ನು ಬಂಧಿಸಬೇಕಿದೆ’ ಎಂದು ತಿಳಿಸಿದರು.

‘ರೌಡಿ ಮಂಜೂರ್ ವಿರುದ್ಧ ಭಾರತಿನಗರ, ಶಿವಾಜಿನಗರ, ಪುಲಿಕೇಶಿನಗರ ಹಾಗೂ ಇತರೆ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಜೊತೆಗೆ, ರಾಜಕೀಯ ಮುಖಂಡರ ಸಂಬಂಧಿ ಎಂಬುದಾಗಿ ಹೇಳಿಕೊಂಡು ಹಲವರನ್ನು ವಂಚಿಸಿರುವ ಮಾಹಿತಿಯೂ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.