ADVERTISEMENT

ಏರೊ ಇಂಡಿಯಾ 2021: ತಾಲೀಮು ನಿರತ ಲೋಹದ ಹಕ್ಕಿಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 17:56 IST
Last Updated 1 ಫೆಬ್ರುವರಿ 2021, 17:56 IST

ಬೆಂಗಳೂರು: ವಿಶ್ವದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ‘ಏರೊಇಂಡಿಯಾ 2021’ಕ್ಕೆ ನಗರದನೀಲ ಗಗನ ಸಜ್ಜಾಗಿದೆ. ಕೋವಿಡ್‌ ಕಾರ್ಮೋಡ ಕರಗುತ್ತಿರುವ ಸಮಯದಲ್ಲಿ ಬಾನಂಗಳದಲ್ಲಿ ಬಣ್ಣ ಬಣ್ಣದ ರಂಗವಲ್ಲಿ ಮೂಡಿಸಲು ಲೋಹದ ಹಕ್ಕಿಗಳು ತಾಲೀಮಿನಲ್ಲಿ ನಿರತವಾಗಿವೆ.

ಇದೇ 3ರಿಂದ (ಬುಧವಾರ) 5ರವರೆಗೆ (ಶುಕ್ರವಾರ) ನಡೆಯುವ ಈ ಪ್ರದರ್ಶನಕ್ಕೆ ಜನ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ರಫೇಲ್‌ ವಿಮಾನಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದಿರುವ ಭಾರತೀಯ ವಾಯುಪಡೆಯು ತನ್ನ ಸಾಮರ್ಥ್ಯವನ್ನು ಜಗತ್ತಿನೆದುರು ತೆರೆದಿಡುವ ತವಕದಲ್ಲಿದೆ. ಇನ್ನೊಂದೆಡೆ ಭೂಸೇನೆ, ನೌಕಾಪಡೆ, ಹಾಗೂ ರಕ್ಷಣಾ ಪರಿಕರಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಡಿಆರ್‌ಡಿಒ, ಬಿಎಇಎಂಲ್‌, ಇಸ್ರೊ, ಎಚ್‌ಎಎಲ್‌ ಮೊದಲಾದ ದೇಸಿ ಸಂಸ್ಥೆಗಳು ತಮ್ಮ ಇತ್ತೀಚಿನ ಸಾಧನೆಗಳನ್ನು ಜನರ ಮುಂದಿಡಲು ಮಳಿಗೆಗಳನ್ನು ಅಣಿಗೊಳಿಸುತ್ತಿವೆ.

ಕೋವಿಡ್ ಮಹಾಮಾರಿಯ ಸಂಕಟದ ನಡುವೆಯೂ ಈ ಬಾರಿಯ ಪ್ರದರ್ಶನದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಾಗಿ ಈಗಾಗಲೇ 14 ದೇಶಗಳ ಪ್ರತಿನಿಧಿಗಳು ನಗರಕ್ಕೆ ಬಂದಿಳಿದಿದ್ದಾರೆ. ತಾವು ಉತ್ಪಾದಿಸುವ ರಕ್ಷಣಾ ಪರಿಕರಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ತವಕದಲ್ಲಿರುವ ಈ ದೇಶಗಳ ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳೊಂದಿಗೆ ಯಲಹಂಕದ ವಾಯುನೆಲೆಯಲ್ಲಿ ಬೀಡುಬಿಟ್ಟಿವೆ.

ADVERTISEMENT

ಏರೊಇಂಡಿಯಾದ 12ನೇ ಆವೃತ್ತಿಯಲ್ಲಿ ತಾಲೀಮಿನ ವೇಳೆ ವಿಮಾನಗಳು ನೆಲಕ್ಕುರುಳಿ ಪೈಲಟ್‌ಗಳು ಮೃತಪಟ್ಟಿದ್ದನ್ನು ಹಾಗೂ ಸಾವಿರಾರು ಕಾರುಗಳು ಹೊತ್ತಿ ಉರಿದಿದ್ದನ್ನು ಕಣ್ಣಾರೆ ಕಂಡಿದ್ದ ಯಲಹಂಕ ಪ್ರದೇಶದ ನಿವಾಸಿಗಳು ಈ ಬಾರಿ ಏನೂ ಅನಾಹುತ ಸಂಭವಿಸದಿರಲಿ ಎಂದು ಹಾರೈಸುತ್ತಿದ್ದಾರೆ.

ದೇಶದಲ್ಲಿಕೋವಿಡ್‌ ಹರಡುವ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದ್ದರೂ, ಈ ಪ್ರದರ್ಶನಕ್ಕೆ ಬಂದವರಿಂದ ಸೋಂಕು ಹರಡುವುದನ್ನು ತಡೆಯಲು ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೋವಿಡ್‌ ಸೋಂಕು ಹೊಂದಿಲ್ಲ ಎಂಬ ಬಗ್ಗೆ ಜ.31ರ ಬಳಿಕ ಪಡೆದ ಪ್ರಮಾಣಪತ್ರ ಇರುವವರಿಗಷ್ಟೇ ಪ್ರದರ್ಶನದ ಪ್ರದೇಶಕ್ಕೆ ಪ್ರವೇಶಾವಕಾಶ ನೀಡಲಾಗಿದೆ. ವೈಮಾನಿಕ ಪ್ರದರ್ಶನಕ್ಕೆ ಬಂದವರಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ ಹೆಚ್ಚಿನ ತಪಾಸಣೆ ನಡೆಸಲು ಹಾಗೂ ಸೋಂಕಿತರು ಪತ್ತೆಯಾದರೆ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ಒದಗಿಸುವುದಕ್ಕೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳ ವಿಶೇಷ ತಂಡಗಳನ್ನು ಪ್ರದರ್ಶನದ ಸ್ಥಳದಲ್ಲಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.