ADVERTISEMENT

ಮುಗಿದ ಮತದಾನ–ದಣಿವು ಮರೆತು ಕೊಂಚ ನಿರಾಳ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 4:51 IST
Last Updated 20 ಏಪ್ರಿಲ್ 2019, 4:51 IST
ಮೊಮ್ಮಗಳು ಹಿತಾಂಶು ಜತೆ ವಿರಾಮದ ಕ್ಷಣದಲ್ಲಿ ಡಿ.ವಿ.ಸದಾನಂದಗೌಡ ದಂಪತಿ –ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌.
ಮೊಮ್ಮಗಳು ಹಿತಾಂಶು ಜತೆ ವಿರಾಮದ ಕ್ಷಣದಲ್ಲಿ ಡಿ.ವಿ.ಸದಾನಂದಗೌಡ ದಂಪತಿ –ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌.   

ರಿಲ್ಯಾಕ್ಸ್ ಮೂಡ್‌ನಲ್ಲಿ ರಿಜ್ವಾನ್

ಬೆಂಗಳೂರು:
ಚುನಾವಣೆ ಘೋಷಣೆ ಆದಾಗಿನಿಂದ ಮತದಾನ ಮುಗಿಯುವ ತನಕ ಎಡಬಿಡದೆ ಪ್ರಚಾರದಲ್ಲಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಶುಕ್ರವಾರ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು.

ರಾತ್ರಿ 12ರವರೆಗೂ ಕಾರ್ಯಕರ್ತರೊಂದಿಗೇ ಇದ್ದ ರಿಜ್ವಾನ್, 1 ಗಂಟೆಯ ಸುಮಾರಿಗೆ ಮಲಗಿದರು. ಬೆಳಿಗ್ಗೆ ತಡವಾಗಿ ಎದ್ದರು.

ಬೆನ್ಸನ್‌‌ ಟೌನ್‌ನಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು. ಮಕ್ಕಳೊಂದಿಗೆ ಆಟವಾಡಿದರು. ಮನೆಗೆ ಬಂದ ಆಪ್ತರೊಂದಿಗೂ ಕೆಲ ಹೊತ್ತು ಕಳೆದರು. ಮಧ್ಯಾಹ್ನ ಮಸೀದಿಗೆ ತೆರಳಿ ನಮಾಜ್ ಮಾಡಿದರು. ಬಳಿಕ ಫ್ರೇಜರ್‌ ಟೌನ್‌ನಲ್ಲಿ ಅವರು ಕಟ್ಟಿಸುತ್ತಿರುವ ಮನೆ ಕೆಲಸ ಪರಿಶೀಲಿಸಿದರು. ಸಂಜೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚಿಸಿದರು.

ADVERTISEMENT

‘ಆದಾಯ ತೆರಿಗೆ (ಐ.ಟಿ) ದಾಳಿ ನಡೆಸುವ ಮೂಲಕ ನನ್ನ ಧ್ವನಿ ಅಡಗಿಸುವ ಪ್ರಯತ್ನ ಮಾಡಿದರು. ಆದರೂ ವಿಚಲಿತನಾಗದೆ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಶನಿವಾರ ಹೋಗುತ್ತೇನೆ’ ಎಂ‌ದು ತಿಳಿಸಿದರು.

ಬೆಳಗಾವಿಗೆ ಹೋದ ಪ್ರಕಾಶ್ ರಾಜ್

ಇದೇ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರು ಚುನಾವಣೆ ಮುಗಿದರೂ ಬ್ಯುಸಿ ಮೂಡ್‌ನಲ್ಲೇ ಇದ್ದಾರೆ. ಕಾರ್ಯಕ್ರಮ ನಿಮಿತ್ತ ಶುಕ್ರವಾರ ಬೆಳಿಗ್ಗೆ 7.30ಕ್ಕೆ ವಿಮಾನದಲ್ಲಿ ಬೆಳಗಾವಿಗೆ ತೆರಳಿದರು. ಅಲ್ಲಿಂದಲೇ ದೆಹಲಿಗೆ ಪ್ರಯಾಣ ಬೆಳೆಸಲಿರುವ ಅವರು, ಹತ್ತು ದಿನಗಳ ಕಾಲ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದರು.

ರಾಯಚೂರಿಗೆ ತೆರಳಿದ ಪಿ.ಸಿ.ಮೋಹನ್‌

ಚುನಾವಣಾ ಪ್ರಚಾರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಕಾರ್ಯಕರ್ತರೊಂದಿಗೆ ಶುಕ್ರವಾರ ದೀರ್ಘ ಸಭೆ ನಡೆಸಿ, ಮತಗಳ ಲೆಕ್ಕಾಚಾರ ಹಾಕಿದರು.

ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಚಾರದ ಶ್ರಮದಾನ ಮಾಡಲು ಮಧ್ಯಾಹ್ನ ರಾಯಚೂರಿನತ್ತ ಹೊರಟರು.

ಮತದಾನದ ದಿನಕ್ಕೂ ಮುನ್ನ ಬೆಳಿಗ್ಗೆ 5.30ಕ್ಕೆ ಏಳುತ್ತಿದ್ದ ಅವರು, ಶುಕ್ರವಾರ 6.15ಕ್ಕೆ ಹಾಸಿಗೆಯಿಂದ ಎದ್ದು ನಿತ್ಯ
ಕರ್ಮಗಳನ್ನು ಮುಗಿಸಿಕೊಂಡರು.

ಬಳಿಕ ಒಂದು ತಾಸು ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿ, ಸ್ನಾನ, ಪೂಜೆ, ತಿಂಡಿ ಮುಗಿಸಿದರು. ಅಷ್ಟೊತ್ತಿಗಾಗಲೇ ಕಾರ್ಯಕರ್ತರು ಅವರ ಮನೆಯಲ್ಲಿ ಜಮಾಯಿಸಿದ್ದರು.

ಪ್ರತಿ ವಿಧಾನಸಭಾದ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತುಕತೆ ನಡೆಸುತ್ತ ಮತದಾನ ಪ್ರಮಾಣದ ವರದಿ ಪಡೆದರು.

ಕಾರ್ಯಕರ್ತರೊಂದಿಗೆ ಸಭೆ ಮುಗಿಸಿ, ಮಧ್ಯಾಹ್ನದ ಊಟ ಮಾಡಿದ ಮೋಹನ್‌ ಅವರು ರಾಯಚೂರಿನ ಕಡೆಗೆ ಮುಖ ಮಾಡಿದರು.

ಮೊಮ್ಮಗಳ ಜತೆ ಗೌಡರ ಆಟ

ಕಳೆದ ಇಪ್ಪತ್ತು ದಿನಗಳಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಿರುವುದಂತೂ ನಿಜ. ಇದೇ 23ಕ್ಕೆ ಎರಡನೇ ಹಂತದ ಚುನಾವಣೆ ಮುಕ್ತಾಯವಾದ ನಂತರ ನಿತ್ಯದ ದಿನಚರಿಗೆ ಮರಳುತ್ತೇನೆ...

ಸಂಜಯನಗರ ಪ್ರದೇಶದ ಭೂಪಸಂದ್ರದ ತಮ್ಮ ನಿವಾಸದಲ್ಲಿ ನಿರಮ್ಮಳ ಮುಖಮುದ್ರೆಯಲ್ಲಿ ಕುಳಿತಿದ್ದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಹೇಳಿದ ಮಾತುಗಳಿವು.

‘ಪ್ರಚಾರದ ವೇಳೆ ಕ್ಷೇತ್ರದ ಮತದಾರರ ಪ್ರೀತಿಯನ್ನು ಧಿಕ್ಕರಿಸಲಾಗದೆ, ಎಳನೀರು, ಮಜ್ಜಿಗೆ, ಕಾಫಿ, ಟೀ ಮತ್ತು ಲಘು ಉಪಾಹಾರಗಳನ್ನೆಲ್ಲಾ ಆಗಾಗ್ಗೆ ಸೇವಿಸಿದ್ದರಿಂದ ಆರೋಗ್ಯದಲ್ಲಿ ಒಂದಷ್ಟು ಏರುಪೇರಾಗಿರುವುದು ನಿಜ. ನಿತ್ಯದ ಯೋಗ, ವಾಕಿಂಗ್‌ ಸ್ಥಗಿತಗೊಂಡಿದೆ. ಎಲ್ಲವನ್ನೂ ಮತ್ತೆ ಶುರು ಮಾಡಬೇಕು’ ಎಂದರು.

‘ನನ್ನ ಗೆಲುವು ನಿಶ್ಚಿತ. ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬುದು ಜನರ ಅಪೇಕ್ಷೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ದುಡಿದಿದ್ದಾರೆ’ ಎಂಬ ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಮೊಮ್ಮಗಳು ಹಿತಾಂಶು ಸೇರಿದಂತೆ ಕುಟುಂಬದ ಸದಸ್ಯರ ಜೊತೆ ಬೆಳಗಿನ 11 ಗಂಟೆವರೆಗೂ ಕಾಲ ಕಳೆದ ಅವರು, ‘ಸಂಜೆ ಬಾಗಲಕೋಟೆ, ವಿಜಯಪುರಕ್ಕೆ ತೆರಳಬೇಕು. ಅದಕ್ಕೂ ಮುನ್ನ ಪಕ್ಷದ ಕಚೇರಿಗೆ ಹೋಗಬೇಕು’ ಎಂದು ಹೇಳುತ್ತಾ ಹೊರ ನಡೆದರು.

ಕೃಷ್ಣ ಬೈರೇಗೌಡ ಈಗಲೂ ಬ್ಯುಸಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೃಷ್ಣ ಬೈರೇಗೌಡ, ಚುನಾವಣೆ ಮುಗಿದರೂ ಸಾಕಷ್ಟು ಬ್ಯುಸಿಯಾಗಿಯೇ ಕಂಡು ಬಂದರು. ಬೆಳಿಗ್ಗೆಯಿಂದಲೂ ಕುಟುಂಬದ ಸದಸ್ಯರಿಗೆ ಸಮಯ ಕೊಡದ ಅವರು, ಕ್ಷೇತ್ರದ ಮುಖಂಡರ ಜೊತೆ ಸಭೆ ನಡೆಸಿದರು.

‘ಕುಟುಂಬಕ್ಕೆ ಸಮಯ ಮೀಸಲಿಡಲು ಸಾಧ್ಯವಾಗ್ತಿಲ್ಲ. ಕಾರ್ಯಕರ್ತರನ್ನು ಭೇಟಿ ಮಾಡಬೇಕಿದೆ. ಶನಿವಾರದಿಂದ ಅಧಿಕೃತ ಕೆಲಸ ಪ್ರಾರಂಭಿಸುತ್ತೇನೆ’ ಎಂದು ಹೇಳಿದರು.

ಕೃಷ್ಣ ಬೈರೇಗೌಡ ಪತ್ನಿ ಮೀನಾಕ್ಷಿ ಅವರು ಪ್ರತಿಕ್ರಿಯಿಸಿ, ‘ಕುಟುಂಬಕ್ಕೂ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ಅವರಿಗೆ ಕುಟುಂಬಕ್ಕಿಂತಲೂ ಕ್ಷೇತ್ರದ ಜನರೇ ಮೊದಲ ಆದ್ಯತೆ’ ಎಂದರು.

‘ಅವರಿಗೆ ಮೊದಲಿನಿಂದಲೂ ಜನರ ಮೇಲೆ ಹೆಚ್ಚು ಪ್ರೀತಿ. ಹೀಗಾಗಿ ಇಂದೂ ಕಾರ್ಯಕರ್ತರ ಜೊತೆಯಲ್ಲೇ ಇದ್ದಾರೆ. ಈ ಚುನಾವಣೆಯಲ್ಲಿ ಕ್ಷೇತ್ರದ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಗೆಲುವು, ಸೋಲಿನ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆದರೆ, ಉತ್ತಮ ಫಲಿತಾಂಶ ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಡವಾಗಿ ಎದ್ದ ಸೂರ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯ ಮೀಸಲಿಟ್ಟರು.

‘ಕಳೆದ 15 ದಿನಗಳಿಂದ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರಾತ್ರಿ 1 ಅಥವಾ 2ಕ್ಕೆ ಮಲಗಿ ಬೆಳಿಗ್ಗೆ 5 ಗಂಟೆಗೆ ಏಳುತ್ತಿದ್ದೆ. 6.30ರೊಳಗೆ ಪ್ರಚಾರಕ್ಕೆ ಹೋಗುತ್ತಿದ್ದೆ. ಶುಕ್ರವಾರ ತಡವಾಗಿ ಎದ್ದೆ. ನಂತರ, ಮನೆಗೆ ಬಂದ ಕಾರ್ಯಕರ್ತರ ಜತೆಗೆ ಸಮಾಲೋಚಿಸಿದೆ. ಮನೆಯವರ ಜತೆಗೆ ಕಾಲ ಕಳೆದಿದ್ದರಿಂದ ನವೋಲ್ಲಾಸ ಬಂದಿದೆ’ ಎಂದು ತೇಜಸ್ವಿ ಸೂರ್ಯ ಹೇಳಿಕೊಂಡರು.

ಮೈತ್ರಿಕೂಟದ ಅಭ್ಯರ್ಥಿ ಪರ ಹರಿಪ್ರಸಾದ್ ಪ್ರಚಾರ

ಮತದಾನದ ಮರುದಿನವಾದ ಶುಕ್ರವಾರಕೆಲ ಅಭ್ಯರ್ಥಿಗಳು ವಿಶ್ರಾಂತಿಯ ಮೊರೆ ಹೋದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಮಾತ್ರ, ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರದಲ್ಲಿ ನಿರತರಾದರು.

ಮತದಾನಕ್ಕೂ ಮುನ್ನ ಮತಬೇಟೆಯಲ್ಲಿ ನಿರತರಾಗಿದ್ದ ಹರಿಪ್ರಸಾದ್, ಮತದಾನ ಮುಗಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆಯೇ ವಿಮಾನದ ಮೂಲಕ ಹುಬ್ಬಳ್ಳಿಗೆ ಹೋದರು. ಅಲ್ಲಿಂದ ಶಿರಸಿಗೆ ತೆರಳಿ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರ ಮಾಡಿದರು. ಕಾರ್ಯಕರ್ತರೊಂದಿಗೆ ಸುತ್ತಾಡಿ ಇಡೀ ದಿನ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.