ಬೆಂಗಳೂರು: ಕಾನೂನು ಬಾಹಿರವಾಗಿ ನಡೆಸಲಾಗುತ್ತಿರುವ ಕ್ಲಿನಿಕ್, ಪ್ರಯೋಗಾಲಯಗಳ ಮೇಲೆ ದಾಳಿ ನಡೆಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, 2007ರಿಂದ ಕಳೆದ ನವೆಂಬರ್ ಅಂತ್ಯಕ್ಕೆ 1,434 ನಕಲಿ ವೈದ್ಯರ ಮೇಲೆ ಕಾನೂನಿನ ಅಡಿ ಪ್ರಕರಣ ದಾಖಲಿಸಿದೆ.
ವೈದ್ಯಕೀಯ ಪ್ರಮಾಣ ಪತ್ರ ಹೊಂದಿರದಿರುವುದು, ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವುದು, ನಕಲಿ ಪ್ರಮಾಣ ಪತ್ರ ಹೊಂದಿರುವುದು ಸೇರಿ ವಿವಿಧ ಕಾರಣಗಳಿಂದ ಕ್ರಮ ಕೈಗೊಳ್ಳಲಾಗಿದೆ. ಅಲೋಪತಿ, ಹೋಮಿಯೋಪತಿ, ಆಯುರ್ವೇದ, ನ್ಯಾಚುರೋಪತಿ, ಯುನಾನಿ ಹಾಗೂ ಸಿದ್ಧ ವೈದ್ಯರು ಸೇರಿದ್ದಾರೆ. ನಕಲಿ ವೈದ್ಯರು ಹಾಗೂ ಕ್ಲಿನಿಕ್‌ಗಳ ಪತ್ತೆ ಕಾರ್ಯ ಕೆಲ ದಿನಗಳಿಂದ ಚುರುಕುಗೊಂಡಿದೆ ಎನ್ನುವುದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ದಾಖಲಿಸಲಾದ ಪ್ರಕರಣಗಳಲ್ಲಿ ಬೀದರ್‌ನಲ್ಲಿ 423 ನಕಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕೋಲಾರದಲ್ಲಿ 179, ಬೀದರ್‌ನಲ್ಲಿ 170 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಧಿಕ ಸಂಖ್ಯೆಯಲ್ಲಿ ನಕಲಿ ವೈದ್ಯರು ಪತ್ತೆಯಾದ ಜಿಲ್ಲೆಗಳ ಸಾಲಿನಲ್ಲಿ ಈ ಜಿಲ್ಲೆಗಳು ಮೊದಲ ಮೂರು ಸ್ಥಾನದಲ್ಲಿವೆ.
‘ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆಪಿಎಂಇ ಕಾಯ್ದೆಯಡಿ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ) ಕಡ್ಡಾಯವಾಗಿ ನೋಂದಣಿಯಾಗಬೇಕು. ಆದರೆ, ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದ ನಕಲಿ ವೈದ್ಯರು ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಕಾನೂನಿನ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.