ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ‘ಅಧಿಕಾರಿಯೊಬ್ಬರ ಷಡ್ಯಂತ್ರದಿಂದ ನಿವೃತ್ತಿ ವೇತನ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆತಿಲ್ಲ’ ಎಂದು ಆಪಾದಿಸಿ, ಮರಣ ಪತ್ರ ಬರೆದಿಟ್ಟು ಕೃಷಿ ಇಲಾಖೆ ನಿವೃತ್ತ ಸಹಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಾಣಾವರದ ಎಜಿಬಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಬ್ದುಲ್ ರಶೀದ್(64) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಅಧಿಕಾರಿ.
‘ಶುಕ್ರವಾರ ಸಂಬಂಧಿಕರ ಮನೆಗೆ ಪತ್ನಿ ತೆರಳಿದ್ದರು. ಇಬ್ಬರು ಮಕ್ಕಳೂ ಮನೆಯಲ್ಲಿ ಇರಲಿಲ್ಲ. ಆಗ, ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮನೆ ಮಾಲೀಕರು ಕಿಟಕಿ ಮೂಲಕ ಗಮನಿಸಿ ರಶೀದ್ ಅವರ ಪತ್ನಿಗೆ ಕರೆ ಮಾಡಿ ತಿಳಿಸಿದ್ದರು. ನಂತರ, ಸ್ಥಳಕ್ಕೆ ಸೋಲದೇವಹನಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ತಾಲ್ಲೂಕು ಕೃಷಿ ಇಲಾಖೆಯಲ್ಲಿ ಅಬ್ದುಲ್ ರಶೀದ್ ಅವರು ಕೆಲಸ ಮಾಡಿ ನಿವೃತ್ತರಾಗಿದ್ದರು. ಸೇವಾ ಅವಧಿಯಲ್ಲಿ ರಶೀದ್ ಮೇಲೆ ಪ್ರಕರಣವೊಂದು ದಾಖಲಾಗಿತ್ತು. ಅದು ತನಿಖಾ ಹಂತದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಹೋದ್ಯೋಗಿ ಅಧಿಕಾರಿ ವಿರುದ್ಧ ಎಫ್‌ಐಆರ್
‘ನಾನು ಸೇವೆಯಿಂದ ನಿವೃತ್ತನಾಗಿ ನಾಲ್ಕು ವರ್ಷವಾದರೂ ನಿವೃತ್ತಿ ವೇತನ ದೊರೆತಿಲ್ಲ. ಆ ಹಣ ಬಂದರೆ ಮಾತ್ರ ಮುಂದಿನ ಜೀವನ ನಡೆಸಲು ಸಾಧ್ಯ. ಆದರೆ, ಕೆಲಸದ ಅವಧಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಷಡ್ಯಂತ್ರ ನಡೆಸಿದ್ದರಿಂದ ನಿವೃತ್ತಿ ವೇತನ ಸಿಕ್ಕಿಲ್ಲ. ಇದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮರಣ ಪತ್ರದಲ್ಲಿ ಹೆಸರು ಉಲ್ಲೇಖಿಸಿರುವ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.