ಬೆಂಗಳೂರು: ‘ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಜೊತೆಗೆ, ಅವುಗಳನ್ನು ಮೌಲ್ಯವರ್ಧಿಸಿ ಉತ್ಪನ್ನಗಳಾಗಿಸಿ ಮಾರಾಟ ಮಾಡುವುದರಿಂದ ಕೃಷಿಯನ್ನು ಲಾಭದಾಯಕವಾಗಿಸಬಹುದು’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಅಭಿಪ್ರಾಯಪಟ್ಟರು.
ಅಖಂಡ ಕರ್ನಾಟಕ ರೈತ ಸಂಘ ಗಾಂಧಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘45ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಉಪ ಉತ್ಪನ್ನಗಳ ತಯಾರಿಕೆಯೇ ದ್ವಿತೀಯ ಕೃಷಿ (ಸೆಕೆಂಡರಿ ಅಗ್ರಿಕಲ್ಚರ್). ಈ ಸೆಕೆಂಡರಿ ಕೃಷಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಉತ್ತೇಜನ ನೀಡುತ್ತಿದ್ದು, ರೈತರು ಇದರ ಸದುಪಯೋಗ ಮಾಡಿಕೊಂಡರೆ ಕೃಷಿಯಲ್ಲಿ ಲಾಭ ಪಡೆಯಬಹುದು’ಎಂದು ಸಲಹೆ ನೀಡಿದರು.
‘ಉಪ ಉತ್ಪನ್ನಗಳ ತಯಾರಿಕೆ ಜೊತೆಗೆ ಮಾರುಕಟ್ಟೆಯನ್ನೂ ಅನ್ವೇಷಿಸಿ ಸ್ಪರ್ಧಾತ್ಮಕ ದರದಲ್ಲಿ ಉತ್ಪನ್ನಗಳ ಮಾರಾಟ ಮಾಡಲು ಸಿದ್ಧರಾಗಬೇಕು’ ಎಂದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ‘ದೇಶದಲ್ಲಿ ವಸ್ತುಗಳ ಗರಿಷ್ಠ ಚಿಲ್ಲರೆ ದರ (ಎಂಆರ್‌ಪಿ) ತೆಗೆದು ಹಾಕಬೇಕು. ಎಂಆರ್‌ಪಿ ನಿಯಂತ್ರಣ ವ್ಯವಸ್ಥೆ ಕುಸಿತದಿಂದ ಏಕರೂಪ ಗರಿಷ್ಠ ಚಿಲ್ಲರೆ ದರ ನಿಗದಿ ಸಾಧ್ಯವಾಗಿಲ್ಲ. ನಿಯಂತ್ರಣ ವ್ಯವಸ್ಥೆ ಸರಿದಾರಿಗೆ ತರಲು ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ(ಸಿಸಿಎಪಿ) ದಂತೆ, ಕಾರ್ಖಾನೆ ಉತ್ಪನ್ನಗಳ ವೆಚ್ಚ ಮತ್ತು ಬೆಲೆ ಆಯೋಗ ರಚಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.