ADVERTISEMENT

‘ಕೃಷಿ ಉದ್ಯಮಗೊಳಿಸುವ ಯತ್ನ ತಡೆಯಬೇಕು’

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 21:44 IST
Last Updated 9 ಡಿಸೆಂಬರ್ 2020, 21:44 IST
ಮೇಧಾ ಪಾಟ್ಕರ್‌
ಮೇಧಾ ಪಾಟ್ಕರ್‌   

ಬೆಂಗಳೂರು: ‘ನೂತನ ಕೃಷಿ ಕಾಯ್ದೆಗಳು ಬಂಡವಾಳಶಾಹಿಗಳ ಪರವಾಗಿದ್ದು, ಕೃಷಿಯನ್ನು ಉದ್ಯಮವಾಗಿಸುವ ಪ್ರಯತ್ನ ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ವರ್ಗದವರು ರೈತರಿಗೆ ಬೆಂಬಲ ಸೂಚಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮನವಿ ಮಾಡಿಕೊಂಡರು.

ಸಹಯಾನ ಕೆರೆಕೋಣ ಸಂಘಟನೆಯು ಬುಧವಾರ ಆಯೋಜಿಸಿದ ರೈತರ ಜತೆ ನಾವು ನೀವು ಸಾಂಸ್ಕೃತಿಕ ಸ್ಪಂದನ ವೆಬಿನಾರ್‌ನಲ್ಲಿ ಭಾಗವಹಿಸಿದ ಅವರು, ‘ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರಿದ್ದಾರೆ. ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಮೂರು ಕಾಯ್ದೆಗಳೂ ರೈತ ವಿರೋಧಿಯಾಗಿವೆ. ಅವರಿಗೆ

ನ್ಯಾಯ ಒದಗಿಸಿಕೊಡಬೇಕಾಗಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೇಶದ ವಿವಿಧೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೂಕ್ತವಾಗಿ ಚರ್ಚೆ ನಡೆಸದೆಯೇ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ. ಲಾಕ್‌ ಡೌನ್ ಅವಧಿಯಲ್ಲಿಯೇ ಕೃಷಿ ವಿರೋಧಿ ಕಾಯ್ದೆಗಳನ್ನು ತರಲಾಗಿದೆ’ ಎಂದರು.

ADVERTISEMENT

ಪತ್ರಕರ್ತ ಡಿ. ಉಮಾಪತಿ, ‘ಹಿಟ್ಲರ್‌ನ ಧೋರಣೆಗಳು ಸತ್ತಿಲ್ಲ. ಪ್ರಚಂಡ ನಾಯಕರ ಒಡಲು, ಮಿದುಳುಗಳನ್ನು ಸೇರಿಕೊಂಡಿವೆ. ಜನತಂತ್ರದ ಆಧಾರ ಸ್ತಂಭಗಳು ಶಿಥಿಲವಾಗಿವೆ. ನ್ಯಾಯಾಂಗ ವ್ಯವಸ್ಥೆ ಕೂಡ ಹಳಿತಪ್ಪಿದೆ. ದೇಶದ ದಶ ದಿಕ್ಕುಗಳಲ್ಲಿ ಸುಳ್ಳು ಸುದ್ದಿಗಳ ಆರ್ಭಟ ಹೆಚ್ಚುತ್ತಿದೆ. ಜನರ ಆಲೋಚನಾ ಶಕ್ತಿಯನ್ನು ಕುಂದಿಸುವುದು, ನಿಯಂತ್ರಿಸುವುದು ಸುಳ್ಳು ಸುದ್ದಿಗಳ ಗುರಿಯಾಗಿವೆ. ರೈತರ ಹೋರಾಟವು ಸಮಾಜದ ಎಲ್ಲರ ಹೋರಾಟವಾಗಬೇಕು. ಗೂಗಲ್‌ನಿಂದ ಆಹಾರಧಾನ್ಯವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬರುವುದಿಲ್ಲ. ಇದನ್ನು ಮರೆತಿರುವ ವರ್ಗಕ್ಕೆ ಈ ಸತ್ಯವನ್ನು ನೆನಪಿಸಬೇಕಿದೆ’ ಎಂದರು.

ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಕವಿಗಳು ರೈತರ ಕುರಿತಾದ ಕವಿತೆಗಳನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.