ಸಾಂದರ್ಭಿಕ ಚಿತ್ರ
ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಹಿಂದುಳಿದ ವರ್ಗಗಳ ಪ್ರವರ್ಗ–1ರ ಪಟ್ಟಿಯಲ್ಲಿ ಸೇರಿಸಿದ್ದು, ಅದೇ ಪಟ್ಟಿಯಲ್ಲಿ ಮುಂದುವರೆಸಬೇಕು ಎಂದು ಅಹಿಂದ ಕ್ರೈಸ್ತ ವಿಂಗ್ ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್‌ನ ರಾಜ್ಯ ಸಂಚಾಲಕ ಸಿದ್ಧಯ್ಯ ಮೂರ್ತಿ, ‘ಪ್ರವರ್ಗ–1ಕ್ಕೆ ಕೆನೆಪದರ ನೀತಿಯಡಿ ಆದಾಯದ ಮಿತಿ ಅನ್ವಯಿಸುವುದಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರನ್ನು ಪ್ರವರ್ಗ–1ರಲ್ಲೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
‘ಕ್ರೈಸ್ತ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ–3ಬಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಲ್ಲಿನ ಸಮುದಾಯಗಳು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದುವರೆದಿವೆ. ಆದರೆ ಕ್ರೈಸ್ತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಆದ್ದರಿಂದ ಈ ಸಮುದಾಯವನ್ನು ಪ್ರವರ್ಗ 3ಬಿ ಮತ್ತು ಪ್ರವರ್ಗ 3ಎ ಪಟ್ಟಿಗಳನ್ನು ಹೊರತುಪಡಿಸಿ, ಬೇರೆ ಯಾವುದಾದರೂ ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.
ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್, ಯೂನಸ್ ಜೋನ್ಸ್, ಕೆನಡಿ ಶಾಂತಕುಮಾರ್, ಮನೋಹರ್ ಚಂದ್ರಪ್ರಸಾದ್, ಅಲ್ಫೋನ್ಸ್ ಕೆನಡಿ, ಪ್ರಜ್ವಲ್ ಸ್ವಾಮಿ, ರಾಬರ್ಟ್ ಕ್ಲೈವ್, ನಾಥನ್ ಡೇನಿಯಲ್, ಶೀಲಾ ಶಾಂತರಾಜು, ವಸುಧಾ, ಶಿವಶರಣಪ್ಪ, ರಾಜು ಕೋಲಾ, ಶೇಖರ್ ಪಾಲ್, ಜಾರ್ಜ್ ಬುಷ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.