ADVERTISEMENT

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ: ಕೃತಕ ಬುದ್ದಿಮತ್ತೆ ವಿಷಯ ಪರಿಚಯ

ಸ್ಯಾಮ್‌ಸಂಗ್‌ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳೊಂದಿಗೆ ಬೆಂಗಳೂರು ಕೃಷಿ ವಿ.ವಿ ಒಪ್ಪಂದ

ಖಲೀಲಅಹ್ಮದ ಶೇಖ
Published 5 ನವೆಂಬರ್ 2025, 19:18 IST
Last Updated 5 ನವೆಂಬರ್ 2025, 19:18 IST
<div class="paragraphs"><p>ಬೆಂಗಳೂರು ಕೃಷಿ ವಿಶ್ವವಿದ್ಯಾಲಯ</p></div>

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

   

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷಿನ್‌ ಲರ್ನಿಂಗ್‌ (ಎಂಎಲ್‌) ತಂತ್ರಜ್ಞಾನ ಅಳವಡಿಸಿಕೊಳ್ಳುವ ಉದ್ದೇಶದಿಂದ 2025–26ನೇ ಶೈಕ್ಷಣಿಕ ಸಾಲಿನಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ (ಬಿ.ಎಸ್ಸಿ ಕೃಷಿ ಹಾಗೂ ಎಂ.ಎಸ್ಸಿ ಕೃಷಿ) ವಿದ್ಯಾರ್ಥಿಗಳಿಗೆ ಎಐ ಹಾಗೂ ಎಂಎಲ್‌ ವಿಷಯವನ್ನು ಪರಿಚಯಿಸಲಾಗುತ್ತಿದೆ.  

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸ್ಯಾಮ್‌ಸಂಗ್‌ ಕಂಪನಿಯೊಂದಿಗೆ ಎಐ ಮತ್ತು ಎಂಎಲ್‌ ವಿಷಯದ ತರಬೇತಿ ನೀಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಸ್ಯಾಮ್‌ಸಂಗ್‌ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಮೊದಲ ಹಂತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ 300 ವಿದ್ಯಾರ್ಥಿಗಳಿಗೆ ಎಐ–ಎಂಎಲ್‌ ವಿಷಯದ ಬಗ್ಗೆ 80 ಗಂಟೆಗಳ ಕಾಲ ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. 

ADVERTISEMENT

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪದವಿಯ ಎರಡನೇ ಸೆಮಿಸ್ಟರ್‌ನಲ್ಲಿ ‌ಎಐ–ಎಂಎಲ್‌ ವಿಷಯ ಇರಲಿದ್ದು, ಇದಕ್ಕೆ ಅಂಕಗಳು ಇರುವುದಿಲ್ಲ. ಆದರೆ ಕಡ್ಡಾಯವಾಗಿ ಉತ್ತೀರ್ಣ ಆಗಬೇಕು. ಎಂ.ಎಸ್ಸಿ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್‌ಗೆ ಎಐ–ಎಲ್‌ ವಿಷಯ ಇರಲಿದ್ದು, ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು. 

‘ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷಿನ್‌ ಲರ್ನಿಂಗ್‌ (ಎಂಎಲ್) ಎಂಬ ನೂತನ ವಿಭಾಗವನ್ನು ಪ್ರಾರಂಭಿಸಲಾಗಿದೆ. ಇದು ಬಹುಶಿಸ್ತೀಯ ಅಧ್ಯಯನ ವಿಭಾಗವಾಗಿದ್ದು, ಕಂಪ್ಯೂಟರ್‌ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವವರನ್ನು ಇದರ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ’ ಎಂದು ಹೇಳಿದರು. 

‘ಎಐ–ಎಂಎಲ್‌ ನೂತನ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಗರದ ಹಲವು ಎಂಜಿನಿಯರಿಂಗ್‌ ಕಾಲೇಜುಗಳ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಇದರ ಭಾಗವಾಗಿ ಈಗಾಗಲೇ ಗೀತಂ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೇವಾ ವಿಶ್ವವಿದ್ಯಾಲಯ, ಮಣಿಪಾಲ್‌ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ. ಎಐ–ಎಂಎಲ್‌ಗೆ ಸಂಬಂಧಿಸಿದ ಕಂಪ್ಯೂಟರ್‌ ಆಧಾರಿತ ಪಠ್ಯ ವಿಷಯಗಳ ಬಗ್ಗೆ ಎಂಜಿನಿಯರಿಂಗ್‌ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ’ ಎಂದರು. 

‘ಸ್ಯಾಮ್‌ಸಂಗ್‌ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ನೂತನ ಎಐ–ಎಂಎಲ್‌ನ ವಿಭಾಗದ ವಿಷಯಗಳಿಗೆ ಸಂಬಂಧಿಸಿದಂತೆ ಕಂಪನಿಯ ಸಿಬ್ಬಂದಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಇಂತಹ ಈ ವಿಷಯಗಳನ್ನು ಪರಿಚಯಿಸುತ್ತಿದ್ದೇವೆ. ವಿದ್ಯಾರ್ಥಿಗಳು ಉತ್ತೀರ್ಣರಾದ ನಂತರ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಸಹಾಯಕವಾಗಲಿದೆ’ ಎಂದು ತಿಳಿಸಿದರು. 

- ‘ಎಐ–ಎಂಎಲ್‌ ಪದವಿ ಪ್ರಾರಂಭಿಸುವ ಚಿಂತನೆ

’ ‘ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಐ–ಎಂಎಲ್‌ ಕೋರ್ಸ್‌ ಅನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ನಾಲ್ಕು ವರ್ಷಗಳ ನಂತರ ಬಿ.ಎಸ್ಸಿ ಅಗ್ರಿ ಇನ್‌ ಎಐ–ಎಂಎಲ್‌ ಬಿ.ಎಸ್ಸಿ ಹಾರ್ಟಿಕಲ್ಚರ್‌ ಇನ್‌ ಎಐ–ಎಂಲ್‌ ವಿಷಯಗಳಲ್ಲಿ ಪದವಿಯನ್ನೂ ಪ್ರಾರಂಭಿಸುವ ಚಿಂತನೆ ಇದೆ’ ಎಂದು ಎಸ್.ವಿ. ಸುರೇಶ ತಿಳಿಸಿದರು.   ‘ಈಗ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಎಐ–ಎಂಎಲ್‌ ಆಕ್ರಮಿಸಿಕೊಂಡಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಈ ನೂತನ ಕೋರ್ಸ್‌ಗೆ ಅಣಿಗೊಳಿಸುತ್ತಿದ್ದೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.