ADVERTISEMENT

ಬೆಂಗಳೂರು| ನಾರಾಯಣ ಹೆಲ್ತ್‌ ಆಸ್ಪತ್ರೆ: ರೋಗಿಗಳ ದಾಖಲೆ ನಿರ್ವಹಣೆಗೆ AI ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 14:37 IST
Last Updated 22 ಆಗಸ್ಟ್ 2025, 14:37 IST
   

ಬೆಂಗಳೂರು: ರೋಗಿಗಳ ವೈದ್ಯಕೀಯ ದಾಖಲೆಗಳ ನಿರ್ವಹಣೆಗೆ ನಾರಾಯಣ ಹೆಲ್ತ್‌ ಆಸ್ಪತ್ರೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಆಧಾರಿತ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಂಡಿದೆ. 

ಈ ಸಂಬಂಧ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಂತ್ರಜ್ಞಾನ ವಿಭಾಗ ‘ಆತ್ಮ’ ಅಭಿವೃದ್ಧಿಪಡಿಸಿದ ‘ಆತ್ಮ ಐರಾ’ ಎಂಬ ವೈದ್ಯಕೀಯ ಸೇವಾ ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು.

‘ಎಐ ಆಧಾರಿತ ಐರಾ ವ್ಯವಸ್ಥೆಯು ರೋಗಿಗಳ ಡಿಜಿಟಲ್ ಅಥವಾ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಗ್ರಹಿಸಿ, ತಕ್ಷಣವೆ ಕ್ಲಿನಿಕಲ್ ಟೈಮ್‌ ಲೈನ್‌ ಮತ್ತು ಸ್ಮಾರ್ಟ್‌ ಟ್ಯಾಗ್‌ಗಳನ್ನು ರಚಿಸುತ್ತದೆ. ಇದರಿಂದ ರೋಗಿಗಳ ಚಿಕಿತ್ಸಾ ದಾಖಲಾತಿಯು ಸುರಕ್ಷಿತವಾಗಿ ಇರುತ್ತದೆ. ವೈದ್ಯರ ಸಮಾಲೋಚನೆಯೂ ಸ್ವಯಂಚಾಲಿತವಾಗಿ ದಾಖಲಾಗುತ್ತದೆ. ವೈದ್ಯಕೀಯ ಚಿಕಿತ್ಸೆ ಹಾಗೂ ಅನಾರೋಗ್ಯ ಸಮಸ್ಯೆ ಪತ್ತೆಗೆ ಇದು ಸಹಕಾರಿಯಾಗಿದೆ’ ಎಂದು ಆತ್ಮದ ಉತ್ಪನ್ನ ವಿಭಾಗದ ಮುಖ್ಯಸ್ಥ ಜಗದೀಶ್ ರಾಮಸಾಮಿ ತಿಳಿಸಿದರು. 

ADVERTISEMENT

‘ಈ ವ್ಯವಸ್ಥೆ ಅಳವಡಿಕೆಯಿಂದ ರೋಗಿಗಳ ದಾಖಲಾತಿ ಸಮಯ ಶೇಕಡ 40ರಷ್ಟು ಕಡಿತವಾಗಲಿದೆ. ಪ್ರಯೋಗಾಲಯದ ವರದಿಯೂ ವೇಗವಾಗಿ ದೊರೆಯಲಿದೆ. ವೈದ್ಯರು, ಶುಶ್ರೂಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದರು. 

ಆಸ್ಪತ್ರೆಯ ಸಂಸ್ಥಾಪನಾಧ್ಯಕ್ಷ ಡಾ. ದೇವಿ ಶೆಟ್ಟಿ, ‘ತಂತ್ರಜ್ಞಾನ ಮತ್ತು ವೈದ್ಯರು ಪರಸ್ಪರ ಒಟ್ಟಾಗಿ ಕೆಲಸ ಮಾಡುವುದರಿಂದ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಲಭಿಸಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.