
ಬೆಂಗಳೂರು: ಗುತ್ತಿಗೆ ಪದ್ಧತಿ ರದ್ದುಪಡಿಸಿ, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕನಿಷ್ಠ ವೇತನ ₹45 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ನವೆಂಬರ್ 27ರಂದು ರಾಜ್ಯವ್ಯಾಪಿ ಪ‍್ರತಿಭಟನೆ ನಡೆಸಲು ಕಾರ್ಮಿಕ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ನಗರದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಗುರುವಾರ ಆಯೋಜಿಸಿದ್ದ ‘ಸಂವಿಧಾನದ ಭರವಸೆ ಎಲ್ಲಿದೆೆ?. ಶೋಷಕ ಗುತ್ತಿಗೆ ಕಾರ್ಮಿಕ ವ್ಯವಸ್ಥೆ ಮತ್ತು ಮರೀಚಿಕೆಯಾದ ಘನತೆಯ ವೇತನ’ ದುಂಡು ಮೇಜಿನ ಸಭೆಯಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆಯ ವಿರುದ್ಧ ಸಂಘಟಿತ ಹೋರಾಟ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ‘ಕಾರ್ಮಿಕ ವರ್ಗದವರ ಮೇಲೆ ದಾಳಿ ನಡೆಯುತ್ತಿದ್ದು, ಕಾರ್ಮಿಕ ಕಾನೂನುಗಳ ಬದಲಾವಣೆಗೆ ಕೇಂದ್ರ ಸರ್ಕಾರ ಹೊರಟಿದೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಕೈಜೋಡಿಸಲು ಮುಂದಾಗಿದೆ. ದೇಶದಲ್ಲಿ ಶೇಕಡ 90ರಷ್ಟು ಕಾರ್ಮಿಕರು ಕನಿಷ್ಠ ವೇತನ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಕಾರ್ಮಿಕ ಶ್ರಮ ದೋಚುವ ಗುತ್ತಿಗೆ ಪದ್ಧತಿ ಯಾರಿಗೆ ಬೇಕು’ ಎಂದು ಪ್ರಶ್ನಿಸಿದರು
‘ಗುತ್ತಿಗೆ ಕಾರ್ಮಿಕ ವ್ಯವಸ್ಥೆ ರದ್ದುಗೊಳಿಸಬೇಕು, ಎಲ್ಲಾ ಕಾರ್ಮಿಕರನ್ನು ಕಾಯಂಗೊಳಿಸಬೇಕು, ಕನಿಷ್ಠ ವೇತನ ₹42 ಸಾವಿರ ಘೋಷಿಸಬೇಕು. ಉದ್ಯೋಗ ಖಾತರಿ ಹಾಗೂ ಸಮಾನ ದುಡಿಮೆಗೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ನವೆಂಬರ್ 27ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಹಲವು ಕೈಗಾರಿಕೆಗಳಲ್ಲಿ ಕನಿಷ್ಠ ವೇತನ ಹೆಚ್ಚಿಸಿದ್ದರೂ ಗಾರ್ಮೆಂಟ್ಸ್ ಕಾರ್ಮಿಕರ ವೇತನದಲ್ಲಿ ಬದಲಾವಣೆಯಾಗಿಲ್ಲ. ಇದು ಲಿಂಗ ತಾರತಮ್ಯವಲ್ಲದೆ ಬೇರೇನೂ ಅಲ್ಲ. ಆಶಾ ಅಂಗನವಾಡಿ ಕಾರ್ಯಕರ್ತೆಯರೂ ಸಮಸ್ಯೆ ಎದುರಿಸುತ್ತಿದ್ದಾರೆಆರ್.ಪ್ರತಿಭಾ, ಜಿಎಟಿಡಬ್ಲ್ಯುಯು ಅಧ್ಯಕ್ಷೆ
ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಕಡಿಮೆ ವೇತನ ಪರಿಣಾಮ ಮಕ್ಕಳಿಗೆ ಸರಿಯಾದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಅಂಕಿ ಅಂಶ ಪ್ರಕಾರ ಶೇಕಡ 22ರಷ್ಟು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಇದು ಕೇವಲ ಕಾರ್ಮಿಕರ ಮೇಲೆ ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಸಮಾಜವನ್ನೇ ಬಾಧಿಸುವ ಸಮಸ್ಯೆ ಎಂಬುದಾಗಿ ಗುರುತಿಸಬೇಕು ಎಂದರು.
ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಅಪ್ಪಣ್ಣ ,ಆರೋಗ್ಯ ತಜ್ಞೆ ಡಾ. ಸಿಲ್ವಿಯಾ ಕಾರ್ಪಗಮ್, ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ, ಬಾಬು ಮ್ಯಾಥ್ಯೂ, ರಾಜೇಶ್, ರಾಜೇಂದ್ರನ್, ಕರುಣಾ ಹಾಜರಿದ್ದರು. ಬಿಬಿಎಂಪಿ ಪೌರಕಾರ್ಮಿಕರ ಸಂಘ, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಎಚ್‌ಎಎಲ್, ಎನ್‌ಎಎಲ್, ಡಿಆರ್‌ಡಿಒ, ಜಲಮಂಡಳಿ, ನೀರಾವರಿ ನಿಗಮ, ಎನ್‌ಸಿಎಲ್ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.