ADVERTISEMENT

ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 16:20 IST
Last Updated 1 ಅಕ್ಟೋಬರ್ 2024, 16:20 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಸದಸ್ಯರು ಭಾಗವಹಿಸಿದ್ದರು   
ಪ್ರಜಾವಾಣಿ ಚಿತ್ರ
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಸದಸ್ಯರು ಭಾಗವಹಿಸಿದ್ದರು    ಪ್ರಜಾವಾಣಿ ಚಿತ್ರ   

ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್‌ ಆರ್ಗ್‌ನೈಸೇಷನ್‌ (ಎಐಡಿಎಸ್‌ಒ) ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಆಗಸ್ಟ್‌ 1ರಿಂದ ಪದವಿ ತರಗತಿಗಳು ಪ್ರಾರಂಭವಾಗಿವೆ. ಆದರೆ, ಉಪನ್ಯಾಸಕರಿಲ್ಲದ ಪರಿಣಾಮ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ. ವಿಶ್ವವಿದ್ಯಾಲಯಗಳು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಡಿಸೆಂಬರ್‌ 9ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. ಅತಿಥಿ ಉಪನ್ಯಾಸಕರ ಕೌನ್ಸೆಲಿಂಗ್‌ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ನವೆಂಬರ್‌ಗೆ ನೇಮಕಾತಿ ನಡೆಯಲಿದೆ. ಒಂದು ತಿಂಗಳೊಳಗೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ದೇಶದೆಲ್ಲೆಡೆ ಆರ್ಥಿಕ ಬಿಕ್ಕಟ್ಟು ಎದುರಾಗಿ ಪದವಿ ಶಿಕ್ಷಣಕ್ಕೆ ಸೇರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪದವಿ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಲ್ಲಿ ವಿಳಂಭ ಧೋರಣೆ ಖಂಡನೀಯ. ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ತರಗತಿಗಳನ್ನು ಪ್ರಾರಂಭಿಸಬೇಕು’ ಎಂದು ಎಐಡಿಎಸ್‌ಒ ಬೆಂಗಳೂರು ನಗರ ಘಟಕದ ಅಧ್ಯಕ್ಷೆ ಅಪೂರ್ವಾ ಒತ್ತಾಯಿಸಿದರು. 

ADVERTISEMENT

ಎಐಡಿಎಸ್‌ಒ ಸದಸ್ಯರಾದ ನವಾಜ್, ಕಿರಣ, ತುಳಸಿ, ಹಂಸ, ಪ್ರಕೃತಿ, ಸ್ನೇಹಾ, ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.