ADVERTISEMENT

ಏರ್‌ಶೋ; ಬಾನಿಗೆ ಜಿಗಿದ ರಫೇಲ್

ಫೆ. 20ರಿಂದ ಪ್ರದರ್ಶನ ಆರಂಭ: ವಿಮಾನಗಳ ತಾಲೀಮು ಚುರುಕು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 19:22 IST
Last Updated 16 ಫೆಬ್ರುವರಿ 2019, 19:22 IST
ಸೂರ್ಯಕಿರಣ್ ತಂಡದ ಫೈಲಟ್‌ಗಳ ತಾಲೀಮು ವೇಳೆ ಹಾರಾಡಿದ ವಿಮಾನಗಳ ಸೊಬಗಿನ ನೋಟ
ಸೂರ್ಯಕಿರಣ್ ತಂಡದ ಫೈಲಟ್‌ಗಳ ತಾಲೀಮು ವೇಳೆ ಹಾರಾಡಿದ ವಿಮಾನಗಳ ಸೊಬಗಿನ ನೋಟ   

ಬೆಂಗಳೂರು: ಲೋಹದ ಹಕ್ಕಿಗಳ ‘ಏರ್‌ಶೋ’ಗೆ ನಾಲ್ಕು ದಿನಗಳು ಬಾಕಿ ಇದ್ದು, ಯಲಹಂಕದ ವಾಯುನೆಲೆಯಲ್ಲಿ ವಿಮಾನಗಳ ತಾಲೀಮು ಚುರುಕುಗೊಂಡಿದೆ.

ಶನಿವಾರ ಮಧ್ಯಾಹ್ನ 1.30 ಗಂಟೆಯಿಂದ ತಾಲೀಮು ಆರಂಭಿಸಿದ ಸೇನಾ ಪಡೆಯ ಹಲವು ವಿಮಾನಗಳು, ಆರ್ಭಟದ ಸದ್ದಿನೊಂದಿಗೆ ವಾಯುನೆಲೆಯ ಸುತ್ತಮುತ್ತ ಹಾರಾಡಿದವು.

ಸೂರ್ಯ ಕಿರಣ ತಂಡದ ಬಣ್ಣ ಬಣ್ಣದ ವಿಮಾನಗಳು ಬಾನಂಗಳದಲ್ಲಿ ಚಿತ್ತಾರವನ್ನೇ ಬಿಡಿಸಿದವು. ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್‌ಗಳು, ವಾಯುನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು. ಬಳ್ಳಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು, ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವಿಮಾನಗಳ ತಾಲೀಮು ವೀಕ್ಷಿಸಿದರು.

ADVERTISEMENT

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ತಾಲೀಮು ಸಹ ರೋಚಕವಾಗಿತ್ತು. ಅದರ ಪೈಲಟ್‌ಗಳು, ಬಣ್ಣದ ಹೊಗೆ ಮೂಲಕ ನಾನಾ ಚಿತ್ರಗಳನ್ನು ಬಾನಂಗಳದಲ್ಲಿ ಮೂಡಿಸಿದರು.

ಜೋರು ಸದ್ದು ಮಾಡಿದ ರಫೇಲ್: ಹಗರಣದ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದ ರಫೇಲ್ ವಿಮಾನ ಶನಿವಾರ ತಾಲೀಮು ನಡೆಸಿ ಜೋರು ಸದ್ದಿನ ಮೂಲಕ ಜನರೆಲ್ಲ ಬಾನಿನತ್ತ ನೋಡುವಂತೆ ಮಾಡಿತು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಯುನೆಲೆಯಿಂದ ಬಾನಿಗೆ ಜಿಗಿದ ಮೂರು ರಫೇಲ್ ವಿಮಾನಗಳು, ಯಲಹಂಕದಲ್ಲಷ್ಟೆ ಅಲ್ಲದೇ ನಗರದ ಹಲವು ಪ್ರದೇಶಗಳಲ್ಲಿ ಗೋಚರಿಸಿದವು. ಅವುಗಳ ಸದ್ದು ಒಂದು ಕ್ಷಣ ಬೆಚ್ಚಿಬೀಳಿಸುವಂತಿತ್ತು.

ರಫೇಲ್ ವಿಮಾನಗಳು ಲ್ಯಾಂಡಿಂಗ್‌ ಆದ ನಂತರ ತಾಲೀಮು ಶುರು ಮಾಡಿಕೊಂಡ ಬೋಯಿಂಗ್ ಸಿ-17 ಗ್ಲೋಬ್ ವಿಮಾನ ನಿಗದಿತ ಸ್ಥಳದಲ್ಲಿ ಸುತ್ತಾಡಿತು. ಜೊತೆಗೆ ಮಿಲಿಟರಿ ಟ್ಯಾಂಕರ್‌ಗಳು ವಾಯುನೆಲೆಯಲ್ಲೇ ಸುತ್ತಾಡಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದವು.

ಫೆ. 19ರವರೆಗೆ ವಿಮಾನಗಳ ತಾಲೀಮು ಮುಂದುವರಿಯಲಿದ್ದು, 20ರಿಂದ ಏರ್‌ಶೋ ಪ್ರದರ್ಶನ ಆರಂಭವಾಗಲಿದೆ.

ನಿವಾಸಿಗಳ ಆಧಾರ್ ಪರಿಶೀಲನೆ

‘ಏರ್‌ ಶೋ’ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ನಗರ ಪೊಲೀಸರು, ವಾಯುನೆಲೆ ಇರುವ ಯಲಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳ ಆಧಾರ್ ಪರಿಶೀಲನೆ ನಡೆಸುತ್ತಿದ್ದಾರೆ.

ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಮನೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ? ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ. ನಿವಾಸಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಕಾಯಂ ನಿವಾಸಿಗಳೇ? ಎಂಬ ಹಲವು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ಬಾಡಿಗೆದಾರರು ಹಾಗೂ ಹೊರ ರಾಜ್ಯ ಹಾಗೂ ದೇಶಗಳಿಂದ ಬಂದವರ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಎದುರು ನೋಟಿಸ್‌ಗಳನ್ನು ಅಂಟಿಸಿರುವ ಪೊಲೀಸರು, ಸಮುಚ್ಚಯದಲ್ಲಿ ನೆಲೆಸಿರುವ ನಿವಾಸಿಗಳ ಪಟ್ಟಿ ನೀಡುವಂತೆ ವ್ಯವಸ್ಥಾಪಕರಿಗೆ ಗಡುವು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.