ADVERTISEMENT

ಏರ್‌ಕ್ರಾಫ್ಟ್‌ ಮಾದರಿಯ ರೆಸ್ಟೊರೆಂಟ್‌

ಹರವು ಸ್ಫೂರ್ತಿ
Published 5 ಫೆಬ್ರುವರಿ 2020, 19:45 IST
Last Updated 5 ಫೆಬ್ರುವರಿ 2020, 19:45 IST
ರೆಸ್ಟೊರೆಂಟ್ ಆಗುತ್ತಿರುವ ವಿಮಾನ
ರೆಸ್ಟೊರೆಂಟ್ ಆಗುತ್ತಿರುವ ವಿಮಾನ   

ಹಾರಲು ಸಿದ್ಧವಾದ ದೊಡ್ಡ ರೆಕ್ಕೆಗಳು, ಚೂಪಾದ ಮೂತಿ, ಬಲಿಷ್ಠ ಚಕ್ರಗಳು ಆದರೆ ಇದು ವಿಮಾನದ ಆಕಾರವಷ್ಟೇ. ನಗರದ ಜಾಲಹಳ್ಳಿಯಲ್ಲಿ ಇರುವ ರಾಯಲ್ ನಾಗ್ ಏವಿಯೇಷನ್‌ನಲ್ಲಿ ಇಷ್ಟೆಲ್ಲ ಕಸರತ್ತು ನಡೆಯುತ್ತಿರುವುದು ಒಂದು ರೆಸ್ಟೊರೆಂಟ್‌ಗಾಗಿ!

ಹಾರಲು ಸಿದ್ಧವಾದ ದೊಡ್ಡ ರೆಕ್ಕೆಗಳು, ಚೂಪಾದ ಮೂತಿ, ಬಲಿಷ್ಠ ಚಕ್ರಗಳು ಆದರೆ ಇದು ವಿಮಾನದ ಆಕಾರವಷ್ಟೇ.ನಗರದ ಜಾಲಹಳ್ಳಿಯಲ್ಲಿ ಇರುವ ರಾಯಲ್ ನಾಗ್ ಏವಿಯೇಷನ್‌ನಲ್ಲಿ ಇಷ್ಟೆಲ್ಲ ಕಸರತ್ತು ನಡೆಯುತ್ತಿರುವುದು ಒಂದು ರೆಸ್ಟೊರೆಂಟ್‌ಗಾಗಿ!

ಹೌದು,ಏರ್‌ಕ್ರಾಫ್ಟ್‌ ಮಾದರಿಯ ರೆಸ್ಟೊರೆಂಟ್‌ ತಯಾರಿಸಲು ರಾಯಲ್‌ ನಾಗ್‌ ಏವಿಯೇಷನ್‌ನ ರೂವಾರಿ ನರೇಶ್ ಕುಮಾರ್ ಗಣೇಶ್ ಅವರಿಗೆ ಸ್ಫೂರ್ತಿ ನೀಡಿದ್ದು, ಪಂಜಾಬ್‌ನ ಲುಧಿಯಾನದಲ್ಲಿರುವ ‘ಹವಾಯಿ ಅಡ್ಡ’ ರೆಸ್ಟೊರೆಂಟ್. ಇದು ಭಾರತದಲ್ಲೇ ಮೊದಲು ಆರಂಭವಾದ ಏರ್‌ಕ್ರಾಫ್ಟ್‌ ಮಾದರಿಯ ರೆಸ್ಟೊರೆಂಟ್‌. ಈ ರೆಸ್ಟೊರೆಂಟ್ ನೋಡಿಕೊಂಡು ಬಂದ ನರೇಶ್, ತಮ್ಮ ಆಸ್ತಿ ಅಡವಿಟ್ಟು ಮೂರು ಕೋಟಿ ಹಣ ಹೊಂದಿಸಿಕೊಂಡು ಏರ್‌ಬಸ್‌ 320 ಮಾದರಿ ಏರ್‌ಕ್ರಾಫ್ಟ್‌ ತಯಾರಿಸಲು ಸಿದ್ದರಾದರು.

ADVERTISEMENT
ರೆಸ್ಟೊರೆಂಟ್ ಒಳವಿನ್ಯಾಸ

ನರೇಶ್, 2013ರಲ್ಲಿ ರಾಯಲ್ ನಾಗ್ ಏವಿಯೇಷನ್‌ ಅಕಾಡೆಮಿ ಆರಂಭಿಸಿದರು. ಆರ್ಥಿಕ ಸಂಕಷ್ಟದಿಂದ ಕೆಲವೇ ವರ್ಷದಲ್ಲಿ ಈ ಕಾಲೇಜು ಮುಚ್ಚಿದರು. ಸೇನಾ ಹಿನ್ನೆಲೆ ಇರುವ ನರೇಶ್ ನಂತರ ಮಾದರಿ ಏರ್‌ಕ್ರಾಫ್ಟ್‌ ತಾಯಾರಿಕಾ ಘಟಕವನ್ನು ಆರಂಭಿಸಿದರು.

‘ನಮ್ಮ ತಂದೆ, ಅಣ್ಣ ಭಾರತೀಯ ವಾಯುನೆಲೆಯಲ್ಲಿ ದುಡಿದವರು. ನಾನು ಏವಿಯೇಷನ್‌ ಎಂಜಿನಿಯರಿಂಗ್‌ ಮಾಡಿದ್ದೇನೆ. ಏರ್‌ಕ್ರಾಫ್ಟ್‌ ಬಗ್ಗೆ ವಿಶೇಷ ಆಸಕ್ತಿ ಇದೆ. ಕಾಲೇಜು ಮುಚ್ಚಿದ ನಂತರ. ನಾವೇ ಏರ್‌ಕ್ರಾಫ್ಟ್‌ ನಿರ್ಮಾಣ ಘಟಕ ಮಾಡಬೇಕು ಎಂದು ನಿರ್ಧರಿಸಿದೆವು. ಹಣಕಾಸಿಗೆ ತುಂಬಾ ತೊಂದರೆ ಇತ್ತು. ನನ್ನ ಬಳಿ ಇದ್ದ ಜಮೀನು ಒಡವೆ ಎಲ್ಲವನ್ನು ಮಾರಿ ರಾಯಲ್ ನಾಗ್ ಎವಿಯೇಷನ್‌ ಸಂಸ್ಥೆ ಆರಂಭಿಸಿದೆ’ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ನರೇಶ್ ಕುಮಾರ್ ಗಣೇಶ್.

‘ಉತ್ತರಕಾಂಡ ಮೂಲದ ಪೈಲೆಟ್‌ ಒಬ್ಬರು ನಾವು ತಯಾರಿಸಿದ ಮೊದಲ ಏರ್‌ಕ್ರಾಫ್ಟ್‌ ರೆಸ್ಟೊರೆಂಟ್ ಖರೀದಿಸಿದರು. ಅವರೂ ಪೈಲೆಟ್‌ ಆದ ಕಾರಣ ಏರ್‌ಕ್ರಾಫ್ಟ್‌ ವಿನ್ಯಾಸ ವಿಚಾರದಲ್ಲಿ ಸಾಕಷ್ಟು ಸಹಾಯ ಮಾಡಿದರು’ ಎನ್ನುತ್ತಾರೆ ನರೇಶ್‌.

ಏರ್‌ಬಸ್ 380 ನಿಯಾನ್ ಮಾದರಿಯ ರೆಸ್ಟೊರೆಂಟ್ ತಯಾರಿಯಲ್ಲಿ ನರೇಶ್ ಕುಮಾರ್ ಗಣೇಶ್ ಮತ್ತು ತಂಡ

12 ತಿಂಗಳಲ್ಲಿ ಮೊದಲ ಏರ್‌ಕ್ರಾಫ್ಟ್‌ ಮಾದರಿ ರೆಸ್ಟೊರೆಂಟ್ ತಾಯಾರಿಸಿದ್ದಾರೆ. ಒಂದು ಏರ್‌ಕ್ರಾಫ್ಟ್‌ ಮಾದರಿ ರೆಸ್ಟೊರೆಂಟ್ ತಯಾರಿಸಲು ಸಾಗಾಟ ವೆಚ್ಚ, ಒಳವಿನ್ಯಾಸ ಸೇರಿ ₹1.7 ಕೋಟಿ ತಗಲುತ್ತದೆ. ಉತ್ತರಕಾಂಡದ ಈ ರೆಸ್ಟೊರೆಂಟ್ ಅಲ್ಲಿ ಹೆಚ್ಚು ಜನಪ್ರಿಯಗೊಂಡಿದೆ. ದಿನಕ್ಕೆ ₹3 ಲಕ್ಷ ಆದಾಯ ಗಳಿಸುತ್ತಿದೆ. ಏರ್‌ಬಸ್ 380 ನಿಯಾನ್ ಮಾದರಿಯಲ್ಲಿ ಎರಡನೇ ಏರ್‌ಕ್ರಾಫ್ಟ್‌ ರೆಸ್ಟೊರೆಂಟ್‌ ನಿರ್ಮಾಣವಾಗುತ್ತಿದೆ.

ಫೈವ್‌ ಸ್ಟಾರ್‌ ಹೋಟೆಲ್ ಒಳ ವಿನ್ಯಾಸ

ಈ ರೆಸ್ಟೊರೆಂಟ್‌ನಲ್ಲಿ ಫೈವ್‌ ಸ್ಟಾರ್‌ ಹೋಟೆಲ್‌ನಂತಹ ಒಳ ವಿನ್ಯಾಸವನ್ನು ಮಾಡಿದ್ದಾರೆ. ಮ್ಯೂಸಿಕ್‌ ಸಿಸ್ಟಂ, ಬೆಳಕಿನ ವಿನ್ಯಾಸ, ಎಸಿ, ನಿರೀಕ್ಷಣಾ ಕೊಠಡಿ, ಬಾರ್‌ ಕೌಂಟರ್‌ ಅನ್ನು ಇದು ಒಳಗೊಂಡಿದೆ.

‘ಸುರಕ್ಷತೆ ಮತ್ತು ಬಾಳಿಕೆ ಬಗ್ಗೆ ಹೆಚ್ಚು ಗಮನಹರಿಸಿದ್ದೇವೆ. ಹಾರಲು ಅನುಕೂಲವಾಗುವಂತೆ ವಿಮಾನಗಳ ಮೈಪದರ ತೆಳುವಾಗಿದ್ದು, ಲಘುವಾಗಿರುತ್ತದೆ. ಆದರೆ, ನಾವು ರೆಸ್ಟೊರೆಂಟ್ ದೃಷ್ಟಿಯಿಂದ ಹೆಚ್ಚು ದಪ್ಪದ
ಅಲ್ಯೂಮಿನಿಯಂ ಹಾಳೆಗಳನ್ನು ಈ ಏರ್‌ಕ್ರಾಫ್ಟ್‌ ನಿರ್ಮಾಣಕ್ಕೆ ಬಳಸಿದ್ದೇವೆ. ಕಬ್ಬಿಣದ ಸರಳುಗಳಿಂದ ವಿಮಾನಾಕಾರದ ಸ್ಕೆಲಿಟನ್ ಮಾಡಿ ಅಲ್ಯೂಮಿನಿಯಂ ಹಾಳೆ, ಗ್ಲಾಸ್‌ ಫೈಬರ್‌ ಬಳಸಿ ದೇಹಾಕಾರವನ್ನು ಮಾಡಿದ್ದೇವೆ. ಹಳೇ ವಿಮಾನದ ಬಿಡಿಭಾಗವನ್ನೂ ಇದಕ್ಕೆ ಬಳಸಿದ್ದೇವೆ’ ಎನ್ನುತ್ತಾರೆ ಈ ರೆಸ್ಟೊರೆಂಟ್ ವಿನ್ಯಾಸಕ ಎಂಜಿನಿಯರ್ ಕರುಣೇಶ್‌.

ನೈಜತೆಗೆ ಹೆಚ್ಚು ಒತ್ತು ನೀಡಿರುವ ಇವರು ಹಳೇ ವಿಮಾನದ ಚಕ್ರಗಳು, ರಕ್ಕೆಗಳನ್ನು ಮರು ಬಳಸಿದ್ದಾರೆ. ರೆಕ್ಕೆಗಳ ಮೇಲೂ ಕೆಲವು ಆಸನಗಳನ್ನು ಹಾಕಿದ್ದು, ಓಪನ್‌ ಏರ್‌ ಕ್ಯಾಬಿನ್‌ಗಳನ್ನು ಮಾಡಿದ್ದಾರೆ. ಪ್ರೇಮಿಗಳು ಇಲ್ಲಿ ಕ್ಯಾಂಡಲ್ ಲೈಟ್‌ ಡಿನ್ನರ್‌ ಮಾಡಲು ಇಷ್ಟಪಡುತ್ತಿದ್ದಾರೆ.

ನೈಜತೆಯ ಕಾಕ್‌ಪಿಟ್‌: ಪೈಲೆಟ್‌ ಕೂರುವ ಜಾಗ ಕಾಕ್‌ಪಿಟ್‌ ಕೂಡ ನೈಜ್ಯವಾಗಿದೆ. ಏರ್‌ಬಸ್ 380 ನಿಯಾನ್ ಮಾದರಿಯಲ್ಲಿ ಕಾಕ್‌ಪಿಟ್‌ ತಯಾರಾಗುತ್ತಿದೆ. ಮೀಟರ್‌, ಗೇರ್‌, ಸ್ಟೇರಿಂಗ್ ಎಲ್ಲಾ ಇರಲಿದೆ. ಈ ಮಾದರಿ ರೆಸ್ಟೊರೆಂಟ್‌ ತಯಾರಿಸಲು 6 ತಿಂಗಳು ಬೇಕಾಗುತ್ತದೆ.

ರೆಸ್ಟೊರೆಂಟ್ ಒಳನೋಟ

ರಾಜ್ಯದಲ್ಲಿ ಇಲ್ಲದ ಬೇಡಿಕೆ

ಏರ್‌ಕ್ರಾಫ್ಟ್‌ ಮಾದರಿಯ ರೆಸ್ಟೊರೆಂಟ್‌ಗೆ ರಾಜಸ್ಥಾನ, ಡೆಹ್ರಾಡೂನ್ ಮತ್ತು ವಡೋದರಾದಿಂದ ಬೇಡಿಕೆ ಇದೆ. ಉತ್ತರ ಭಾರತದಿಂದ ಇರುವಷ್ಟು ಬೇಡಿಕೆ ನಮ್ಮ ರಾಜ್ಯದಲ್ಲಿ ಇಲ್ಲ ಎನ್ನುವುದು ನರೇಶ್‌ ಬೇಸರ.

‘ಮಾಮೂಲಿ ರೆಸ್ಟೊರೆಂಟ್‌ಗಳ ನಿರ್ಮಾಣಕ್ಕಿಂತ ಏರ್‌ಕ್ರಾಫ್ಟ್‌ ಮಾದರಿಯ ರೆಸ್ಟೊರೆಂಟ್‌ ನಿರ್ಮಿಸಲು ಕಡಿಮೆ ವೆಚ್ಚವಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಬೇಡಿಕೆ ಬಂದಿಲ್ಲ. ಬೆಂಗಳೂರು ಇಂಥ ಫ್ಯಾನ್ಸಿ ರೆಸ್ಟೊರೆಂಟ್‌ ಮಾಡಲು ಸೂಕ್ತ ಸ್ಥಳ. ಇಲ್ಲಿ ಐಟಿ ಹಬ್ ಜನರಿದ್ದಾರೆ. ಈ ಮಾದರಿ ರೆಸ್ಟೊರೆಂಟ್‌ಗಳು ಒಳ್ಳೆಯ ಆದಾಯವನ್ನು ತರಬಹುದು’ ಎನ್ನುತ್ತಾರೆ ನರೇಶ್.

ಸಣ್ಣ ಗಾತ್ರದ ಸಾವಿರಾರು ಶೋ ಪೀಸ್‌ ಏರ್‌ಕ್ರಾಫ್ಟ್‌ಗಳನ್ನು ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹಲವು ಪಬ್, ಹೋಟೆಲ್‌ಗಳಿಗೆ ತಯಾರಿಸಿಕೊಟ್ಟಿದ್ದಾರೆ.

ವಿದ್ಯಾಸಂಸ್ಥೆಗಳಿಗೆ ಹಾರಿದ ವಿಮಾನ

ಶೈಕ್ಷಣಿಕ ಸಂಸ್ಥೆಗಳಿಗೂ ಮಾದರಿ ಏರ್‌ಕ್ರಾಫ್ಟ್‌ಗಳನ್ನು ರಾಯಲ್ ನಾಗ್ ಏವಿಯೇಷನ್ ಮಾಡಿಕೊಡುತ್ತಿದೆ. ಈ ಏರ್‌ಕ್ರಾಫ್ಟ್‌ಗಳು ಪ್ರಾಯೋಗಿಕ ಕಲಿಕೆಗೆ ಬಳಸುವುದರೊಂದಿಗೆ, ಗ್ರೌಂಡ್ ಎಕ್ಸ್‌ಪೀರಿಯನ್ಸ್‌ ಕೂಡ
ಮಾಡಬಹುದು. ಆದರೆ ಎಲ್ಲಾ ಏವಿಯೇಷನ್ ಶಿಕ್ಷಣ ಸಂಸ್ಥೆಗಳು ಮಾದರಿ ಏರ್‌ಕ್ರಾಫ್ಟ್‌ ಖರೀದಿಯಲ್ಲಿ ಆಸಕ್ತಿ ತೋರುವುದಿಲ್ಲ ಎನ್ನುವುದು ನರೇಶ್‌ ಕುಮಾರ್ ಗಣೇಶ್ ಅಳಲು.

‘ಶುಲ್ಕ ವಸೂಲಿಯಲ್ಲೇ ಮುಳುಗಿರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸುವುದಿಲ್ಲ. ಕೆಲವು ಕಾಲೇಜುಗಳು ಮಾತ್ರ ಏರ್‌ಕ್ರಾಫ್ಟ್‌ ಖರೀದಿಯಲ್ಲಿ ಆಸಕ್ತಿ ತೋರುತ್ತಿವೆ’ ಎನ್ನುತ್ತಾರೆ.

ಇವರಿಂದ ಬೆಂಗಳೂರಿನ ರಾಮಯ್ಯ ಕಾಲೇಜು, ಚಂಡಿಗಡ ವಿಶ್ವವಿದ್ಯಾಲಯ, ಅಪೊಲೊ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದರಿ ಏರ್‌ಕ್ರಾಫ್ಟ್‌ಗಳನ್ನು ತರಿಸಿಕೊಂಡಿವೆ. ಇದುವರೆಗೆ 150ಕ್ಕೂ ಹೆಚ್ಚು ಮಾದರಿ ಏರ್‌ಕ್ರಾಫ್ಟ್‌ಗಳನ್ನು ರಾಯಲ್ ನಾಗ್ ಏವಿಯೇಷನ್ ತಯಾರಿಸಿದ್ದಾರೆ.

ರೆಸ್ಟೊರೆಂಟ್ ವೈಶಿಷ್ಟ್ಯ

* 123 ಅಡಿ ಉದ್ದ, 13.5 ಅಡಿ ಅಗಲ

* ನೈಜ ಕಾಕ್‌ಪಿಟ್‌

* ಬಾರ್‌ ಕೌಂಟರ್

* ನಿರೀಕ್ಷಣಾ ಕೊಠಡಿ

* 120 ಆಸನ ವ್ಯವಸ್ಥೆ

* ಫೈವ್‌ ಸ್ಟಾರ್ ಹೋಟೆಲ್ ಒಳವಿನ್ಯಾಸ

* ರೆಕ್ಕೆ ಮೇಲೆ ಕ್ಯಾಂಡಲ್ ಲೈಟ್‌ ಡಿನ್ನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.