ADVERTISEMENT

‘ಧರ್ಮಕ್ಕೆ ಪೆಟ್ಟು ಬಿದ್ದಾಗ ಧ್ವನಿಯೆತ್ತಿ’

ಶಾಸಕರಿಗೆ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 16:28 IST
Last Updated 24 ಜೂನ್ 2023, 16:28 IST
ಸಮಾರಂಭದಲ್ಲಿ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅವರು ನೂತನ ವಿಪ್ರ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. (ಎಡದಿಂದ ನಿಂತವರು) ವಿಶ್ವಾಸ್ ವೈದ್ಯ, ಟಿ.ಎಸ್.ಶ್ರೀವತ್ಸ, ಉದಯ ಗರುಡಾಚಾರ್, ಆರ್.ವಿ.ದೇಶಪಾಂಡೆ, ಸಿ.ಕೆ.ರಾಮಮೂರ್ತಿ, ಅಶೋಕ ಹಾರನಹಳ್ಳಿ ಹಾಗೂ ರವಿ ಸುಬ್ರಮಣ್ಯ ಇದ್ದಾರೆ. -ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅವರು ನೂತನ ವಿಪ್ರ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. (ಎಡದಿಂದ ನಿಂತವರು) ವಿಶ್ವಾಸ್ ವೈದ್ಯ, ಟಿ.ಎಸ್.ಶ್ರೀವತ್ಸ, ಉದಯ ಗರುಡಾಚಾರ್, ಆರ್.ವಿ.ದೇಶಪಾಂಡೆ, ಸಿ.ಕೆ.ರಾಮಮೂರ್ತಿ, ಅಶೋಕ ಹಾರನಹಳ್ಳಿ ಹಾಗೂ ರವಿ ಸುಬ್ರಮಣ್ಯ ಇದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ಪೆಟ್ಟು ಬಿದ್ದಾಗ ಪಕ್ಷ ಭೇದವಿಲ್ಲದೆ ಧ್ವನಿಯೆತ್ತಬೇಕು’ ಎಂದು ಮೇಲುಕೋಟೆ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ತಿಳಿಸಿದರು. 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಗರದಲ್ಲಿ ಶನಿವಾರ ಹಮ್ಮಿಕೊಂಡ ನೂತನ ವಿಪ್ರ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು. 

‘ನಮ್ಮ ಧರ್ಮ, ಸಮಾಜ, ಮಂದಿರ ಹಾಗೂ ಮಠಕ್ಕೆ ಆಪತ್ತು ಬಂದಾಗ ಜನಪ್ರತಿನಿಧಿಗಳು ಹೋರಾಡಬೇಕು. ಎಲ್ಲಾ ಜಾತಿಗಳು ಸೌಹಾರ್ದತೆಯಿಂದ ಇದ್ದಾಗ ಮಾತ್ರ ರಾಷ್ಟ್ರ ನಿರ್ಮಾಣಕ್ಕೆ ಅರ್ಥ ಬರುತ್ತದೆ. ಬ್ರಾಹ್ಮಣರು ಪರರ ಹಿತ ಬಯಸುವವರು. ಬ್ರಾಹ್ಮಣ, ಬ್ರಾಹ್ಮಣ್ಯ ಎನ್ನುವುದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಜೀವನ ಕ್ರಮವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅನೇಕರು ಬ್ರಾಹ್ಮಣ ಸಮಾಜಕ್ಕೆ ಸೇರಿದವರು. ಬ್ರಾಹ್ಮಣರು ಹೆಮ್ಮೆಯಿಂದ ನಾವು ಹಿಂದೂಗಳು, ಸನಾತನ ಧರ್ಮ ಪ್ರತಿನಿಧಿಸುವವರು ಎಂದು ಹೇಳಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಶಾಸಕ ಆರ್.ವಿ. ದೇಶಪಾಂಡೆ, ‘ಬ್ರಾಹ್ಮಣ ಸಮಾಜದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸಮುದಾಯದ ದೊಡ್ಡ ಆಸ್ತಿ ಬುದ್ಧಿವಂತಿಕೆ. ಹಾಗಾಗಿ, ಸಮಾಜದವರು ಇನ್ನೂ ಉಳಿದುಕೊಂಡಿದ್ದಾರೆ. ಹಿಂದೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಶ್ರಮಿಸಿದೆ’ ಎಂದು ತಿಳಿಸಿದರು. ‌

ಮಂಡಳಿಗೆ ಹೆಚ್ಚಿನ ಅನುದಾನ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಸಿಗುವಂತಾಗಬೇಕು. ಅದೇ ರೀತಿ, ಬ್ರಾಹ್ಮಣ ಮಹಾಸಭಾದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನಕ್ಕೆ ಸಂಬಂಧಿಸಿದಂತೆಯೂ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು. ರಾಜಕೀಯದಲ್ಲಿ ಸಮಾಜದ ಪ್ರತಿನಿಧಿಗಳು ಕಡಿಮೆಯಾಗುತ್ತಿದ್ದಾರೆ. ಸಂಖ್ಯೆ ಕಡಿಮೆ ಇದ್ದಾಗ ಹೆಚ್ಚು ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದರು. 

‘ಗೋ ರಕ್ಷಿಸಿ ಮತಾಂತರ ತಡೆಯಿರಿ’
‘ಮಹಾಸಭೆ ಕಟ್ಟಡ ನಿರ್ಮಾಣಕ್ಕೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ₹ 5 ಕೋಟಿ ಘೋಷಿಸಿದ್ದರು. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು. ಗೋವುಗಳ ರಕ್ಷಣೆ ಹಾಗೂ ಬಲವಂತದ ಮತಾಂತರ ತಡೆಗೆ ಸರ್ಕಾರ ಆದ್ಯತೆ ನೀಡಬೇಕು. ಬಲವಂತದ ಮತಾಂತರ ತಡೆಯು ದೇಶದ ವೈವಿಧ್ಯತೆಯ ಭಾಗವೂ ಆಗಿದೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಇದಕ್ಕೆ ಸ್ಪಂದಿಸಿದ ದೇಶಪಾಂಡೆ ‘ಮತಾಂತರ ಹಾಗೂ ಗೋಹತ್ಯೆಯ ಬಗ್ಗೆ ಅಧಿವೇಶನದಲ್ಲಿ ನನಗೆ ಸರಿಕಂಡಂತೆ ಹೇಳುತ್ತೇನೆ. ಆ ಸ್ವಾತಂತ್ರ್ಯ ನಮ್ಮ ಪಕ್ಷದಲ್ಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.