ADVERTISEMENT

ಪತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ ಆರೋಪ: ನಟಿ ಶಶಿಕಲಾ ವಿರುದ್ಧ ಎಫ್‌ಐಆರ್‌

ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 16:04 IST
Last Updated 26 ಜನವರಿ 2025, 16:04 IST
<div class="paragraphs"><p>ಶಶಿಕಲಾ </p></div>

ಶಶಿಕಲಾ

   

Shashikala Narayan Facebook page

ಬೆಂಗಳೂರು: ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಪೋಷಕ ನಟಿ ಶಶಿಕಲಾ ಸೇರಿದಂತೆ ಇಬ್ಬರ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ADVERTISEMENT

ಪತಿ ಹಾಗೂ ನಿರ್ದೇಶಕ ಟಿ.ಜಿ. ಹರ್ಷವರ್ಧನ್ ನೀಡಿರುವ ದೂರನ್ನು ಆಧರಿಸಿ ಶಶಿಕಲಾ ಹಾಗೂ ಸಿನಿ ಬಜ್‌ ಕನ್ನಡ ಯೂಟ್ಯೂಬ್ ಚಾನೆಲ್ ಮಾಲೀಕ ಅರುಣ್‌ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಬ್ಬರ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.

‘ಸಿನಿಮಾ ನಿರ್ದೇಶಕನ ಜತೆಗೆ ಕ್ಯಾಬ್ ಚಾಲಕನಾಗಿಯೂ ಕೆಲಸ ಮಾಡುತ್ತಿರುವ ನನಗೆ 2021ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಶಶಿಕಲಾ ಅವರ ಪರಿಚಯವಾಯಿತು. ತನ್ನೊಂದಿಗೆ ಸಂಬಂಧ ಹೊಂದಿದರೆ ಸಿನಿಮಾದಲ್ಲಿ ಹಣ ಹೂಡಿಕೆ ಮಾಡುವುದಾಗಿ ನಂಬಿಸಿದ್ದರು. ಸಿನಿಮಾ ನಿರ್ಮಾಣ ಮಾಡುತ್ತಾರೆಂಬ ಆಸೆಯಿಂದ ಒಪ್ಪಿಕೊಂಡೆ. ಅವರನ್ನು ಮದುವೆಯಾಗಲು ಆಗುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಕೆಲವು ದಿನಗಳ ಬಳಿಕ ಮದುವೆ ಆಗುವಂತೆ ಬಲವಂತ ಮಾಡಿದರು. ನಮ್ಮಿಬ್ಬರ ನಡುವಿನ ಮೊಬೈಲ್ ಕರೆಗಳ ಸಂಭಾಷಣೆಗಳ ರೆಕಾರ್ಡಿಂಗ್‌ ಇಟ್ಟುಕೊಂಡು ಬೆದರಿಸಿದ್ದರು’ ಎಂದು ದೂರಿನಲ್ಲಿ ಹರ್ಷವರ್ಧನ್ ಆರೋಪಿಸಿದ್ದಾರೆ.

‘ನಾನು ಮದುವೆಗೆ ಒಪ್ಪದಿದ್ದಾಗ ನಾಗರಬಾವಿಯಲ್ಲಿರುವ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಬಳಿಕ ಇಬ್ಬರಿಗೂ ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದರು. 2022ರಲ್ಲಿ ಶಶಿಕಲಾ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ನನ್ನನ್ನು ಬಂಧಿಸಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ನನಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲ ಎಂದು ಶಶಿಕಲಾ ಬೆದರಿಸಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ವೃತ್ತಿ ಜೀವನ ಹಾಳಾಗುವುದು ಬೇಡ, ಆಕೆಯನ್ನು ಮದುವೆಯಾಗು' ಎಂದು ನಿರ್ಮಾಪಕರು ನೀಡಿದ್ದ ಸಲಹೆ ಮೇರೆಗೆ 2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಮದುವೆಯಾದೆ. ಮದುವೆಯಾದ ಕೆಲ ದಿನಗಳ ನಂತರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ನನ್ನನ್ನು ಮನೆಯಿಂದ ಹೊರಹಾಕುತ್ತಿದ್ದರು‌. ಒಂದೆರಡು ಗಂಟೆಗಳ ಬಳಿಕ ತಾವೇ ಮನೆಯೊಳಗೆ ಸೇರಿಸುತ್ತಿದ್ದರು’ ಎಂದು ಹರ್ಷವರ್ಧನ್ ಆರೋಪಿಸಿದ್ದಾರೆ.

‘ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ, 'ಕಪ್ಪು ಹಣವನ್ನು ಬದಲಾಯಿಸುವ ಅವಕಾಶ ಸಿಗುತ್ತದೆ' ಎಂದಿದ್ದರು. 2024ರ ಆಗಸ್ಟ್‌ನಲ್ಲಿ ನನ್ನನ್ನು ಮನೆಯಿಂದ ಹೊರಹಾಕಿರುವ ಶಶಿಕಲಾ, ಯೂಟ್ಯೂಬ್ ಚಾನೆಲ್‌ ಒಂದರ ಮಾಲೀಕನ ಜತೆ ಸೇರಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವುದನ್ನು ನಿಲ್ಲಿಸಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.