ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ದರ್ಜೆ–3 ಮೇಲ್ವಿಚಾರಕೇತರ ಹಾಗೂ ದರ್ಜೆ–4ರ ನೌಕರರಿಗೆ ಅಂತರ ನಿಗಮಗಳ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ (ಕೆಕೆಆರ್‌ಟಿಸಿ) ಜುಲೈ 5ರ ಬೆಳಿಗ್ಗೆ 10ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ.
ಆಗಸ್ಟ್ 18ರಂದು ಸಂಜೆ 5.30ರ ವರೆಗೆ ಆನ್‌ಲೈನ್ ಮೂಲಕ: www.ksrtc.org/transferರಲ್ಲಿ ಸಾಮಾನ್ಯ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ವರ್ಗಾವಣೆಯಲ್ಲಿ ಪತಿ/ಪತ್ನಿ ಪ್ರಕರಣಗಳೊಂದಿಗೆ ಶೇ 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು, ತೀವ್ರ ತರಹದ ಅನಾರೋಗ್ಯ (ಎಚ್‌ಐವಿ, ಹೃದ್ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್ ಸಮಸ್ಯೆ, ಮೂತ್ರಪಿಂಡ ವೈಫಲ್ಯ, ಮಿದುಳು ಸಂಬಂಧಿ ಕಾಯಿಲೆಗಳು) ಪ್ರಕರಣಗಳಲ್ಲಿ ವರ್ಗಾವಣೆಯಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ನೌಕರರು ವೈದ್ಯಕೀಯ ಮಂಡಳಿ ನೀಡುವ ಪ್ರಮಾಣ ಪತ್ರ ಸಲ್ಲಿಸಬೇಕು. ಪರಸ್ಪರ ವರ್ಗಾವಣೆಗೆ ಪರಸ್ಪರ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆ ಶೇ 10ರ ಬದಲಿಗೆ ಶೇ 15ರಷ್ಟನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.