ಯಲಹಂಕ: ‘ಹುಟ್ಟಿನಿಂದ ಯಾರೂ ಮೇಲು-ಕೀಳಾಗುವುದಿಲ್ಲ; ನಮ್ಮ ಗುಣದಿಂದ ಮಾತ್ರ ನಾವು ಮೇಲೆ-ಕೆಳಗೆ ಎಂಬುದನ್ನು ಸಂಪಾದಿಸಬಹುದು ಎಂಬ ಸಂದೇಶವನ್ನು ಸಾರುವ ಮೂಲಕ ನಮ್ಮನ್ನು ಜಾಗೃತರಾಗಿ ಮಾಡಲು ತಮ್ಮ ಜೀವನವನ್ನೇ ತ್ಯಾಗಮಾಡಿದ ಮಹಾನ್ ಮಾನವತಾವಾದಿ ಅಂಬೇಡ್ಕರ್’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯಭವನ ಟ್ರಸ್ಟ್ ಹಾಗೂ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬುದ್ಧ, ಬಸವಣ್ಣ ಮತ್ತು ಗಾಂಧೀಜಿ, ಕುವೆಂಪು ಅವರು ಇದೇ ಸಂದೇಶವನ್ನು ಸಾರಿದರು. ಇವರೆಲ್ಲರೂ ಹೇಳಿದ ಸಂದೇಶವನ್ನು ಸಂವಿಧಾನದಲ್ಲಿ ಕಾರ್ಯರೂಪಕ್ಕೆ ತಂದವರು ಅಂಬೇಡ್ಕರ್ ಅವರು’ ಎಂದರು.
ದೇಶದಲ್ಲಿ ಇಂದು ಇವರ ಸಂದೇಶಗಳನ್ನು ಸಹಿಸದ ಕೆಲವರು ಸಂವಿಧಾನವನ್ನು ತಿದ್ದಬೇಕೆಂಬ ಪಿತೂರಿ ನಡೆಸುತ್ತಿದ್ದಾರೆ. ಬಡವರ ದುಡಿಮೆ ಶ್ರೀಮಂತರ ಕೈಸೇರುವ ಮೂಲಕ ಕೆಲವು ಶ್ರೀಮಂತರು ಕುಬೇರರಾಗುತ್ತಿದ್ದು, ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಜಾಗೃತರಾಗದಿದ್ದರೆ, ಸಂವಿಧಾನದಲ್ಲಿ ಅಡಕಮಾಡಿರುವ ಸಮಾನತೆಯ ಸಾರಾಂಶ ನನಸಾಗದೆ ಕನಸಾಗಿಯೇ ಉಳಿಯಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎರಡು ಸಾವಿರ ಬಡಮಹಿಳೆಯರಿಗೆ ಸೀರೆ ಹಾಗೂ 500 ಮಂದಿ ಪುರುಷರಿಗೆ ಬಟ್ಟೆ ವಿತರಿಸಲಾಯಿತು.
ಅಂಬೇಡ್ಕರ್ ಸಮುದಾಯಭವನ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವಿ.ನಾಗರಾಜ್, ಕಾಂಗ್ರೆಸ್ ಮುಖಂಡರಾದ ಎಂ.ಹನುಮಂತೇಗೌಡ, ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್.ಕೆ.ಮಹೇಶ್‌ಕುಮಾರ್, ಬಿ.ಜಿ.ರಮೇಶ್, ಎಚ್.ಎ.ಶಿವಕುಮಾರ್, ಎಸ್.ಮಾರುತಿ, ಶಾಂತಕುಮಾರ್, ದಿವ್ಯ ರಾಜಣ್ಣ, ವಕೀಲ ಎಸ್.ವಿ. ರಾಮಚಂದ್ರಪ್ಪ, ಸ್ಥಳೀಯ ಮುಖಂಡರಾದ ಎಚ್.ಶಂಕರಪ್ಪ, ಬಿ.ರವಿಗೌಡ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.