ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣಗೊಂಡ ದಿನದ ಸ್ಮರಣೆಯನ್ನು ನಗರದ ವಿವಿಧೆಡೆ ವಿವಿಧ ಸಂಘಟನೆಗಳು, ಸಂಸ್ಥೆಗಳು, ಪಕ್ಷಗಳು ಮಾಡಿದವು.
ಚರ್ಚ್ ಸ್ಟ್ರೀಟ್‌ನಲ್ಲಿ ಮೇಣದ ಬತ್ತಿ ಹಚ್ಚಿ ಮೆರವಣಿಗೆ ನಡೆಸಿ ಗೌರವ ಅರ್ಪಿಸಲಾಯಿತು.
ಬಿಬಿಎಂಪಿ: ಬಿಬಿಎಂಪಿ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು.
ಬಿಬಿಎಂಪಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕೆ ಹರೀಶ್ ಕುಮಾರ್, ಉಪ ಆಯುಕ್ತ ಮಂಜುನಾಥ ಸ್ವಾಮಿ, ಜಂಟಿ ಆಯುಕ್ತೆ ಲಕ್ಷ್ಮಿದೇವಿ, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ: ‘ಸಂವಿಧಾನ ಶಿಲ್ಪಿ, ಸಮ ಸಮಾಜದ ನಿರ್ಮಾಣದ ಕನಸು ಕಂಡಿದ್ದ ಅಂಬೇಡ್ಕರ್ ಅವರ ಚಿಂತನೆಗಳನ್ನು ನನಸು ಮಾಡುವ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
‘ಅಂಬೇಡ್ಕರ್ ಅವರ ಆಶಯಗಳನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಕಳಕಳಿ ಇರುವುದು ಬಿಜೆಪಿಗೆ ಮಾತ್ರ. ಅಂಬೇಡ್ಕರರ ಆಶಯಕ್ಕೆ ಮಸಿ ಬಳಿದವರು ಕಾಂಗ್ರೆಸ್ಸಿಗರು’ ಎಂದು ಆರೋಪಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಅಂಬೇಡ್ಕರ್ ಇರುವಾಗ ಸಹಿಸಿಕೊಳ್ಳದ ಕಾಂಗ್ರೆಸ್, ಇವತ್ತು ಅವರ ಫೋಟೊ ಇಟ್ಟು ಭಾಷಣ ಮಾಡುತ್ತಿದೆ. ತಾವೇ ಸಂವಿಧಾನ ರಕ್ಷಕರೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಕು.ಸಿ. ಮಂಜುಳಾ, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ, ಮುಖಂಡ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.
ಎಬಿಎಸ್‌ಪಿ: ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ(ಎಬಿಎಸ್‌ಪಿ) ವತಿಯಿಂದ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ಕಾರ್ಯಕ್ರಮವನ್ನು ಕಾನ್ಶಿರಾಮ್ ನಗರದಲ್ಲಿ ಹಮ್ಮಿಕೊಳ್ಳಲಾಯಿತು.
ಎಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ. ಗೋಪಿನಾಥ್, ರಾಜ್ಯ ಸಂಯೋಜಕ ಆರ್. ಮುನಿಯಪ್ಪ, ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಉಪಾಧ್ಯಕ್ಷರಾದ ಲೋಕೇಶ್‌ಚಂದ್ರ, ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್, ಚಿಕಣ್ಣ ಪೂಜಾರಿ, ಉದಯ ಕುಮಾರ್, ಮಣ್ಣೂರು ನಾಗರಾಜ್, ಕಾರ್ಯದರ್ಶಿಗಳಾದ ರಮೇಶ್ ಕತ್ರಿಗುಪ್ಪೆ, ಬೈಲಪ್ಪ ಭಾಗವಹಿಸಿದ್ದರು.
ತಾಂತ್ರಿಕ ಮಹಾವಿದ್ಯಾಲಯ: ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರವು ‘ದೀಪದೊಂದಿಗೆ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಸಂವಿಧಾನ ಶಿಲ್ಪಿಯನ್ನು ಸ್ಮರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿಗಳು ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.