ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಆರೋಗ್ಯ ಇಲಾಖೆಯೇ ನಿರ್ವಹಣೆ ಮಾಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 250 ಕೋಟಿ ಉಳಿತಾಯವಾಗಲಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆಂಬುಲೆನ್ಸ್ ಸೇವೆಯನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ, ಈ ಸೇವೆ ನಿಯಂತ್ರಣ ಮಾಡುವ ‘ಕಮಾಂಡ್ ಕಂಟ್ರೋಲ್’ ಕೇಂದ್ರವನ್ನು ಇಲಾಖೆಯ ಅಧೀನಕ್ಕೆ ಒಳಪಡಿಸುವ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ ದೊರೆತಿದೆ.
‘ಈ ಕ್ರಮದಿಂದಾಗಿ 108 ಆರೋಗ್ಯ ಕವಚ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗುವ ವಿಶ್ವಾಸವಿದೆ. ಈ ಸೇವೆಯಡಿ 715 ಆಂಬುಲೆನ್ಸ್‌ಗಳ ನಿರ್ವಹಣೆಗೆ ‘ಕಮಾಂಡ್ ಕಂಟ್ರೋಲ್’ ಕೇಂದ್ರ ಪ್ರಾರಂಭಿಸಲಾಗುವುದು. ಇದಕ್ಕಾಗಿ ‘112 ಎನ್‌ಜಿ-ಇಆರ್‌ಎಸ್ಎಸ್’ ತಂತ್ರಾಂಶ ಬಳಸಿಕೊಳ್ಳಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ 108 ಕಂಟ್ರೋಲ್ ಸೆಂಟರ್‌ಗಳು ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಆಂಬುಲೆನ್ಸ್‌ಗಳಿಗೆ ಚಾಲಕರು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಮಟ್ಟದಲ್ಲಿಯೇ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಆರೋಗ್ಯ ಕವಚದಡಿ ಕಾರ್ಯಾಚರಣೆ ಮಾಡುತ್ತಿರುವ ಆಂಬುಲೆನ್ಸ್‌ಗಳ ಜತೆಗೆ ರಾಜ್ಯದಲ್ಲಿರುವ ಸಾವಿರಕ್ಕೂ ಅಧಿಕ ಆಂಬುಲೆನ್ಸ್‌ಗಳನ್ನು ಕೂಡಾ 108 ಕಮಾಂಡ್ ಸೆಂಟರ್ ಅಧೀನಕ್ಕೆ ತರಲು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.