ಬೆಂಗಳೂರು: ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕಿರು ಹಣಕಾಸು ಯೋಜನೆಯಡಿ ಸಹಾಯಧನ ನೀಡುವ ಅರ್ಜಿ ನೋಂದಾಯಿಸಲು ₹ 3,000 ಲಂಚ ಪಡೆಯುತ್ತಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ನಾರಾಯಣಪ್ಪ ಎಂಬವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ನಿಗಮದ ತಾಲ್ಲೂಕು ಕಚೇರಿಗೆ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಅರ್ಜಿ ಸಲ್ಲಿಸಿದ್ದರು. ಪ್ರತಿ ಅರ್ಜಿಯ ನೋಂದಣಿಗೆ ₹ 100ರಂತೆ ನಾರಾಯಣಪ್ಪ ಲಂಚ ಪಡೆಯುತ್ತಿದ್ದರು. ಮಹಿಳೆಯರ ಪರವಾಗಿ ಗುರುರಾಜ್ ಎಂಬುವವರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ಸಲ್ಲಿಸಿದ್ದರು.
30 ಅರ್ಜಿಗಳ ನೋಂದಣಿಗೆ ಕಚೇರಿ ಸಮೀಪದ ಬೇಕರಿ ಬಳಿ ಶುಕ್ರವಾರ ₹ 3,000 ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಪೊಲೀಸರು, ನಾರಾಯಣಪ್ಪ ಅವರನ್ನು ಬಂಧಿಸಿದರು. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.