ADVERTISEMENT

ಅಮೆರಿಕದ ಲಿಂಗತ್ವ ಅಲ್ಪಸಂಖ್ಯಾತ ವಿರೋಧಿ ನೀತಿಗೆ ಖಂಡನೆ: ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 15:57 IST
Last Updated 26 ಫೆಬ್ರುವರಿ 2025, 15:57 IST
<div class="paragraphs"><p>ಅಕ್ಕೈ ಪದ್ಮಸಾಲಿ</p></div>

ಅಕ್ಕೈ ಪದ್ಮಸಾಲಿ

   

ಬೆಂಗಳೂರು: ಅಮೆರಿಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ಜಾರಿ ಮಾಡುತ್ತಿರುವುದನ್ನು ವಿರೋಧಿಸಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಸಾಲಿ, ಟ್ರಾನ್ಸ್‌ಗರ್ಲ್ಸ್‌ ಜೆಂಡರ್‌ ಹಕ್ಕುಗಳ ಕಾರ್ಯಕರ್ತೆ ರಕ್ಷಿತಾ ಮಲ್ಲಿಕಾರ್ಜುನ ಮತ್ತು ಇಂಟರ್‌ಸೆಕ್ಸ್‌ ಸಮುದಾಯದ ಹಕ್ಕುಗಳ ಕಾರ್ಯಕರ್ತೆ ಎಂ.ಎಸ್. ಅಬೇದಾ ಬೇಗಂ ಪತ್ರ ಬರೆದಿದ್ದಾರೆ.

‘ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಡೆಯುವ ಹೋರಾಟಕ್ಕೆ ಅಮೆರಿಕದಲ್ಲಿ ಕ್ವೀರ್ ಮತ್ತು ಟ್ರಾನ್ಸ್‌ಜೆಂಡರ್‌ ಕಾರ್ಯಕರ್ತರು ನಡೆಸಿದ್ದ ಹೋರಾಟ ಸ್ಫೂರ್ತಿಯಾಗಿದೆ. ಆದರೆ, ನೀವು ಲಿಂಗತ್ವ ಅಲ್ಪಸಂಖ್ಯಾತರನ್ನು ದೂರ ಇಡುವ ಕಾನೂನು ತರುತ್ತಿರುವುದು ದಿಗಿಲು ಹುಟ್ಟಿಸಿದೆ. ಇದು ಟ್ರಾನ್ಸ್‌ಜೆಂಡರ್‌ಗಳ ಜೀವಿಸುವ ಹಕ್ಕನ್ನೇ ಕಸಿದುಕೊಳ್ಳುವಂತದ್ದಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

‘ಹುಟ್ಟಿನಿಂದ ಗಂಡು ಅಥವಾ ಹೆಣ್ಣು ಅಲ್ಲದವರಿಗೆ ಸೈನ್ಯದಲ್ಲಿ, ಉದ್ಯೋಗಗಳಲ್ಲಿ ಅವಕಾಶ ನಿರಾಕರಿಸುವ, ಟ್ರಾನ್ಸ್‌ಜೆಂಡರ್‌ ಶಸ್ತ್ರಚಿಕಿತ್ಸೆ ಕೊನೆಗೊಳಿಸುವ ನಿಮ್ಮ ಕ್ರಮವು ಸಂಕುಚಿತವಾದುದು. ಲಿಂಗತ್ವ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಲ್ಲಗಳೆಯುವ ಮೂಲಕ ಕಾನೂನಿನ ರಕ್ಷಣೆ ಇಲ್ಲದಂತೆ ಮಾಡುವ ಕ್ರಮ. ಇದರಿಂದ ಲಿಂಗತ್ವ ಅಲ್ಪಸಂಖ್ಯಾತರು ಇನ್ನಷ್ಟು ಕಿರುಕುಳ, ಹಿಂಸೆ, ಆಕ್ರಮಣಗಳಿಗೆ ತುತ್ತಾಗಲಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ಹೃದಯಹೀನ ಕ್ರಮಗಳನ್ನು ಸಹಿಸಿಕೊಂಡು ಅಮೆರಿಕದ ಕ್ವೀರ್ ಮತ್ತು ಟ್ರಾನ್ಸ್‌ಜೆಂಡರ್‌ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ಹೋರಾಟಕ್ಕೆ ಇಳಿಯುತ್ತಾರೆ ಎಂಬ ವಿಶ್ವಾಸ ನಮಗಿದೆ. ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.