ಆಟ ಸಿರಿಪರ್ಬ -2025: "ಸಿರಿಮುಡಿ ಪ್ರಶಸ್ತಿ -2025" ಫಲಿತಾಂಶ ಘೋಷಣೆ
ಬೆಂಗಳೂರು: ಅಖಿಲ ಅಮೆರಿಕ ತುಳುವೆರೆ ಅಂಗಣ (ಆಟ) ಇದರ ಪ್ರಪ್ರಥಮ ಸಮಾವೇಶ "ಆಟ ಸಿರಿಪರ್ಬ - 2025" ಕಳೆದ ವಾರ ಜುಲೈ 5 ರಂದು ನಾರ್ತ್ ಕೆರೊಲಿನಾ ರಾಲಿಯಲ್ಲಿ ನಡೆಯಿತು.
ಸಿರಿಪರ್ಬದ ಅಂಗವಾಗಿ ಸುಮಾರು 8 ತಿಂಗಳ ಕೆಳಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳುವಿನಲ್ಲಿ ರಚಿಸಿದ ಬರಹಗಳನ್ನೂ (ಕಾದಂಬರಿ, ನಾಟಕ, ಸಾಹಿತ್ಯ, ಇತಿಹಾಸ) ತುಳು ಲಿಪಿ ಮತ್ತು ಕನ್ನಡ ಲಿಪಿಯಲ್ಲಿ ಬರಹಗಾರರಿಂದ ಆಹ್ವಾನಿಸಲಾಗಿತ್ತು. ಈ ಎರಡು ವಿಭಾಗದಲ್ಲಿ ವಿಜೇತರಾದ ಅರ್ಹ ಬರಹಗಾರರನ್ನು ಲೇಖನದ ಸ್ವಂತಿಕೆ, ಭಾಷಾ ಪಾಂಡಿತ್ಯ, ಸಾಮಾಜಿಕ ಪರಿಣಾಮ, ಸೃಜನ ಶೀಲತೆ, ಓದುವ ಸಾಮರ್ಥ್ಯ, ಬರವಣಿಗೆ ಕೌಶಲ್ಯ , ಸಾಹಿತ್ಯಿಕ ಘನತೆ, ವಿಷಯದ ಜ್ಞಾನ ಹೀಗೆ ಸುಮಾರು 10 ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಿ, "ಸಿರಿಮುಡಿ ಪ್ರಶಸ್ತಿ - 2025" ವಿಜೇತರ ಹೆಸರನ್ನು ಸಾಹಿತ್ಯ ಸಮಿತಿಯ ಅಧ್ಯಕ್ಷರಾದ ಪ್ರಶಾಂತ ಕುಮಾರ್ ಮಟ್ಟು ಅವರು ಘೋಷಿಸಿದರು. ಕನ್ನಡ ಲಿಪಿಯಲ್ಲಿ ವಿಜೇತರಾದ ಬರಹ "ತುಳು ಕಾವ್ಯ ಮೀಮಾಂಸೆ", ಇದನ್ನು ಬರೆದವರು ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್. ತುಳು ಲಿಪಿಯಲ್ಲಿ ವಿಜೇತರಾದ ಬರಹ ತುಳುವೆರೆ ಚಾವಡಿ(ರಿ) ಬೆಂಗಳೂರು, ಇದರಿಂದ ಪ್ರಕಟಗೊಂಡ "ಜೋಕುಲೆ ಉಜ್ವಾಲ್". ಪ್ರೇಕ್ಷಕರ ಕರತಾಡನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಹನೀಯರಿಗೂ ಹಾಗೂ ವಿಜೇತರಾದ ಇಬ್ಬರಿಗೂ ಧನ್ಯವಾದಗಳನ್ನು ತಿಳಿಸಲಾಯಿತು.
ಈ "ಸಿರಿಮುಡಿ ಪ್ರಶಸ್ತಿ - 2025", ಆಟದ ಸಂಸ್ಥಾಪಕ ಅಧ್ಯಕ್ಷರಾದ ಭಾಸ್ಕರ ಶೇರಿಗಾರ್ ಮತ್ತು ಅವರ ಕುಟುಂಬದ ಪ್ರಾಯೋಜಿತ 75,೦೦೦/- ರೂಪಾಯಿಗಳ ನಗದಿನೊಂದಿಗೆ ಪ್ರಶಸ್ತಿ ಫಲಕ ಹೊಂದಿರುತ್ತದೆ. ಈ ಪ್ರಶಸ್ತಿಯನ್ನು ಭಾರತದಲ್ಲಿ ನಡೆಯುವ ತುಳು ಸಮಾವೇಶದ ಸೂಕ್ತ ವೇದಿಕೆಯಲ್ಲಿ ವಿತರಿಸಲಾಗುವುದು. ಪ್ರಶಸ್ತಿ ಘೋಷಿಸುವ ಸಂದರ್ಭದಲ್ಲಿ ಸಿರಿಪರ್ಬಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಎಂರಿಸಲ್ಟ್ ಫೌಂಡರ್ ಸಿಇಓ ಶೇಖರ್ ನಾಯ್ಕ್, ನಿಟ್ಟೆ ವಿಶ್ವ ವಿದ್ಯಾನಿಲಯದ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಹಾಗೂ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸಾಯಿಗೀತಾ ಹೆಗ್ಡೆ, ಅನಿವಾಸಿ ಭಾರತೀಯ ರವಿ ಶೆಟ್ಟಿ ಮೂಡಂಬೈಲು, ಡಾ ದಿನಕರ್ ಬೆಳ್ಳೆ ರೈ ಅವರೊಂದಿಗೆ ಆಟದ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್, ಉಪಾಧ್ಯಕ್ಷರಾದ ಶಿರೀಶ್ ಶೆಟ್ಟಿ ಹಾಗೂ ಸುದರ್ಶನ್ ಶೆಟ್ಟಿ, ಸಿರಿಪರ್ಬ ಸಚೇತಕರಾದ ಉಮೇಶ್ ಅಸೈಗೋಳಿ ಹಾಗೂ ರಂಜನಿ ಅಸೈಗೋಳಿ, ಟ್ರಾಂಗ್'ಲ್ ತುಳುವೆರೆ ಚಾವಡಿಯ ಅಧ್ಯಕ್ಷ ಸುರೇಶ್ ಶೆಟ್ಟಿ , ಮತ್ತು ಪ್ರಭಾಕರ್ ಭಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೌಲ್ಯಮಾಪನ ಸಮಿತಿಯ ಸದಸ್ಯರಾದ ಗಣಪತಿ ಭಟ್, ರವಿ ಉಪಾದ್ಯಾಯ, ವೀರೇಂದ್ರ ನಾಯಕ್, ಶ್ರೀವತ್ಸ ಜೋಶಿ, ಭಾಸ್ಕರ ಶೇರಿಗಾರ್, ಶ್ರೀವಲ್ಲಿ ರೈ ಮಾರ್ಟೆಲ್, ಪ್ರಭಾಕರ್ ಭಟ್, ಜಗದೀಶ್ ಕುಮಾರ್ ಮತ್ತು ರೇಷ್ಮಾ ಚೆಟ್ಟಿಯಾರ್ ಇವರಿಗೆಲ್ಲ ಅನಂತ ಧನ್ಯವಾದಗಳನ್ನು ಆಟ ಸಾಹಿತ್ಯ ಸಮಿತಿಯ ಅಧ್ಯಕ್ಷರಾದ ಪ್ರಶಾಂತ ಕುಮಾರ್ ರವರು ಸಲ್ಲಿಸಿದರು.
ಆಟದ ಮತ್ತೊಬ್ಬ ನಿರ್ದೇಶಕರಾದ ಡಾ. ರತ್ನಾಕರ್ ಶೇರಿಗಾರ್ ಇವರು ಕಾರ್ಯಕ್ರಮ ನಿರೂಪಿಸಿದರು. ಈ ಸಿರಿಮುಡಿ ಪ್ರಶಸ್ತಿಯನ್ನು ಮುಂದಿನ ಸಮಾವೇಶದಲ್ಲೂ ಮುಂದುವರಿಸಲಾಗುವುದು. ಹೀಗೆ ತುಳು ಭಾಷೆಯಲ್ಲಿ ವಿನೂತನವಾದ ಕಾವ್ಯ, ಲೇಖನ, ಪ್ರಬಂಧ, ಕಾದಂಬರಿಗಳು ಹುಟ್ಟಿ ಬರಲಿ, ಇನ್ನಷ್ಟು ಸಾಹಿತಿಗಳು, ಬರಹಗಾರರು ಹುಟ್ಟಲಿ, ಇಂತಹ ಪ್ರಶಸ್ತಿಯನ್ನು ನೀಡುವುದರ ಮೂಲಕ ನಮ್ಮ ಆಟ ಸಂಸ್ಥೆಯು ತುಳುವನ್ನು ಉಳಿಸಿ, ಬೆಳೆಸಿ ಮತ್ತು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯಕ್ಕೆ ಸದಾ ಬೆಂಬಲವನ್ನು ನೀಡುತ್ತದೆ ಎಂಬುದನ್ನು ಸಭೆಯಲ್ಲಿ ತಿಳಿಸಲಾಯಿತು.
ವರದಿ : ಪ್ರಶಾಂತ ಕುಮಾರ್, ಆಟದ ನಿರ್ದೇಶಕ ಹಾಗೂ ಸಾಹಿತ್ಯ ಸಮಿತಿಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.