ADVERTISEMENT

ಅಮೃತಹಳ್ಳಿ: ಬಯಲು ರಂಗಮಂದಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 17:37 IST
Last Updated 17 ಜನವರಿ 2026, 17:37 IST
ಅಮೃತಹಳ್ಳಿಯ ಕೆರೆಯ ಪಕ್ಕದ ಬಯಲು ರಂಗಮಂದಿರದಲ್ಲಿ  ಕಲಾವಿದರು ಭರತನಾಟ್ಯ ಪ್ರದರ್ಶನ ಪ್ರಸ್ತುತಪಡಿಸಿದರು
ಅಮೃತಹಳ್ಳಿಯ ಕೆರೆಯ ಪಕ್ಕದ ಬಯಲು ರಂಗಮಂದಿರದಲ್ಲಿ  ಕಲಾವಿದರು ಭರತನಾಟ್ಯ ಪ್ರದರ್ಶನ ಪ್ರಸ್ತುತಪಡಿಸಿದರು   

ಯಲಹಂಕ: ಅಮೃತಹಳ್ಳಿಯ ಕೆರೆಯ ಪಕ್ಕದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರವನ್ನು ಉದ್ಘಾಟಿಸಲಾಯಿತು.

ಸರ್ಕಾರದ ನಗರೋತ್ಥಾನ ಅನುದಾನದಡಿಯಲ್ಲಿ ₹1.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಬಯಲು ರಂಗಮಂದಿರದಲ್ಲಿ 500 ಮಂದಿ ಕುಳಿತು ವೀಕ್ಷಿಸಲು ಸ್ಥಳಾವಕಾಶವಿದೆ. ಹಿಂಭಾಗದ ಪರದೆಯ ಮೇಲೆ ಹಾಗೂ ಸುತ್ತಲಿನ ಗೋಡೆಯ ಮೇಲೆ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದೆ.

‘ಕೆರೆಯಲ್ಲಿ ಈಗಾಗಲೆ ನಡಿಗೆ ಪಥ, ಯೋಗ ಪೆವಿಲಿಯನ್‌, ತೆರೆದ ಜಿಮ್‌, ಮಕ್ಕಳು ಆಟವಾಡಲು ಮತ್ತು ಹಿರಿಯ ನಾಗರಿಕರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೆರೆಯ ಸುತ್ತಮುತ್ತ ಹಲವಾರು ಬಡಾವಣೆಗಳು ನಿರ್ಮಾಣವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ರಂಗಮಂದಿರದ ಅವಶ್ಯಕತೆಯಿತ್ತು. ಈ ದಿಸೆಯಲ್ಲಿ ಇಲ್ಲಿನ ಜನರು ಒಂದೆಡೆ ಸೇರಿ ಸ್ಥಳೀಯ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ರಂಗಮಂದಿರ ನಿರ್ಮಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ADVERTISEMENT

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸ್ವಸ್ತಿಕ ನೃತ್ಯ ಮತ್ತು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಪ್ರದರ್ಶನ ಹಾಗೂ ಸ್ಥಳೀಯ ಕಲಾವಿದರಿಂದ ಭರತನಾಟ್ಯ, ಗಾಯನ, ಕೊಳಲುವಾದನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬಿಬಿಎಂಪಿ ಮಾಜಿ ಸದಸ್ಯ ಪಿ.ವಿ.ಮಂಜುನಾಥ ಬಾಬು, ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಕೃಷ್ಣಬೈರೇಗೌಡ, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ವಿ.ಹರಿ, ಕೆ.ಗೌರೀಶ್‌, ಶಾಂತಮ್ಮ, ದಿವ್ಯ ರಾಜಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.