ADVERTISEMENT

‘ಅನಂತ’ ನೆನಪುಗಳನ್ನು ಮೆಲುಕು ಹಾಕಿದ ಒಡನಾಡಿಗಳು

ನಗರದ ವಿವಿಧೆಡೆ ಅನಂತ ಕುಮಾರ್ 61ನೇ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 22:39 IST
Last Updated 22 ಸೆಪ್ಟೆಂಬರ್ 2020, 22:39 IST
ಅನಂತಕುಮಾರ್ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಿದರು.
ಅನಂತಕುಮಾರ್ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಿದರು.   

ಬೆಂಗಳೂರು: ಅನಂತ ಕುಮಾರ್‌ ಅವರ ಸರಳ ಜೀವನ, ಸಾಮಾಜಿಕ ಕಳಕಳಿ, ಹಾಸ್ಯ ಪ್ರಜ್ಞೆ, ಪರಿಸರ ಪ್ರೇಮ, ರಾಜಕೀಯ ತಂತ್ರಗಾರಿಕೆ ಸೇರಿದಂತೆ ‌ಬಹುಮುಖ ವ್ಯಕ್ತಿತ್ವವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅವರ ಒಡನಾಡಿಗಳು ನೆನಪಿಸಿಕೊಂಡು, ನುಡಿ ನಮನ ಸಲ್ಲಿಸಿದರು.

ಅನಂತಕುಮಾರ್ ಅವರ 61ನೇ ಜನ್ಮದಿನದ ಪ್ರಯುಕ್ತ ಅನಂತ ಕುಮಾರ್ ಪ್ರತಿಷ್ಠಾನವು ಆನ್‌ಲೈನ್ ಮೂಲಕ ಏರ್ಪಡಿಸಿದ್ದ ‘ಅನಂತ ನಮನಗಳು’ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ‘ಅನಂತ ಪಥ’ ಮಾಸಪತ್ರಿಕೆಯನ್ನು ಬಿಡುಗಡೆಮಾಡಿದರು.

‘ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಅನಂತ ಕುಮಾರ್ ನೆನಪಾಗುತ್ತಾರೆ. ನಮ್ಮ ಸಂಬಂಧ 30 ವರ್ಷಕ್ಕೂ ಹಳೆಯದು. ಪಕ್ಷಕ್ಕೆ ಅವರ ಕೊಡುಗೆಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಪಕ್ಷವು ರಾಜ್ಯದಲ್ಲಿ ಭದ್ರವಾಗಿ ತಳವೂರಿದ್ದರ ಹಾಗೂ ನಾನು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದರ ಹಿಂದೆ ಅವರ ಶ್ರಮವೂ ಇದೆ’ ಎಂದರು.

ADVERTISEMENT

₹ 5 ಕೋಟಿ ಬಿಡುಗಡೆ: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘ಕನ್ನಡದ ನೆಲ, ಜಲದ ವಿಷಯ ಬಂದಾಗ ಅನಂತಕುಮಾರ್ ಮುಂಚೂಣಿಯಲ್ಲಿ ಇರುತ್ತಿದ್ದರು. ಅವರ ಹೆಸರಿನ ಪ್ರತಿಷ್ಠಾನಕ್ಕೆ ₹ 20 ಕೋಟಿ ಮಂಜೂರಾಗಿದ್ದು, ಅದರಲ್ಲಿ ಈ ವರ್ಷ ₹ 5 ಕೋಟಿ ನೀಡಿದ್ದೇವೆ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ರಾಜ್ಯಸಭೆ ಸದಸ್ಯಯ ರಾಜೀವ್ ಚಂದ್ರಶೇಖರ್, ಸಂಸದ ತೇಜಸ್ವಿ ಸೂರ್ಯ, ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಶಾಸಕ ರವಿ ಸುಬ್ರಮಣ್ಯ, ತಾರಾ ಅನೂರಾಧ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಡಾ. ಶ್ರೀನಾಥ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಪಿ.ವಿ. ಕೃಷ್ಣ ಸೇರಿದಂತೆ ಹಲವರು ‍ಪಾಲ್ಗೊಂಡರು.

ಗಿಡ ನೆಟ್ಟು ಜನ್ಮದಿನ ಆಚರಣೆ
ಅನಂತಕುಮಾರ್ ಅವರ ಜನ್ಮದಿನದ ಪ್ರಯುಕ್ತ ನಿಮ್ಹಾನ್ಸ್‌ ಆವರಣದಲ್ಲಿ ಅದಮ್ಯ ಚೇತನ ಪ್ರತಿಷ್ಠಾನದ ನೇತೃತ್ವದಲ್ಲಿ 61 ಗಿಡಗಳನ್ನು ನೆಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಅನಂತಕುಮಾರ್ ಅವರ ಆಪ್ತರು, ಒಡನಾಡಿ ಗಳು ಹಾಗೂ ಸ್ನೇಹಿತರು ಗೌರವನಮನ ಸಲ್ಲಿಸಿದ್ದರು.

‘ಅನಂತಕುಮಾರ್ ಅವರು ಹಸಿರು ಬೆಂಗಳೂರಿನ ಕನಸು ಕಂಡವರು. ಅವರ ಜನ್ಮದಿನದಂದು ಪ್ರತಿವರ್ಷ ಗಿಡಗಳನ್ನು ನೆಡಲಾಗುತ್ತದೆ’ ಎಂದು ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.

‘ಗಾಂಧಿ ಬಜಾರ್ ಕನ್ನಡ ಮರೆತಿರಲಿಲ್ಲ’
‘ಅನಂತಕುಮಾರ್ 25 ವರ್ಷಗಳನ್ನು ದೆಹಲಿಯಲ್ಲಿ ಕಳೆದರೂ ಗಾಂಧಿ ಬಜಾರ್ ಕನ್ನಡವನ್ನು ಮರೆತಿರಲಿಲ್ಲ. ಭಾಷೆ ಮತ್ತು ಬೆಂಗಳೂರಿನ ಬಗ್ಗೆ ಅವರಿಗೆ ವಿಶೇಷ ಕಾಳಜಿಯಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.

ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಮಮಂದಿರ, ಅಖಂಡ ಭಾರತ ಹಾಗೂ ಪರಮಾಣು ಶಕ್ತಿಯುತ ಭಾರತದ ನಿರ್ಮಾಣ ಅವರ ಕನಸಾಗಿತ್ತು. ಅವರು ಅವಸರದಲ್ಲಿ ಜೀವನ ಮುಗಿಸಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.