ADVERTISEMENT

‘ಪ್ರಾಣಿ, ಪಕ್ಷಿಗಳಿರುವುದು ಕೊಂದು ತಿನ್ನುವುದಕ್ಕಲ್ಲ’

65ನೇ ವನ್ಯಜೀವಿ ಸಪ್ತಾಹ ಸಮಾರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:03 IST
Last Updated 9 ಅಕ್ಟೋಬರ್ 2019, 20:03 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹೊಸ ಲಾಂಭನವನ್ನು ವಜೂಭಾಯಿ ವಾಲಾ ಬಿಡುಗಡೆ ಮಾಡಿದರು. ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್‌ ಕೆ. ಮಲ್ಖಾಂಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್ ಮೋಹನ್, ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ರಂಗರಾವ್ ಇದ್ದರು –ಪ್ರಜಾವಾಣಿ ಚಿತ್ರ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹೊಸ ಲಾಂಭನವನ್ನು ವಜೂಭಾಯಿ ವಾಲಾ ಬಿಡುಗಡೆ ಮಾಡಿದರು. ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್‌ ಕೆ. ಮಲ್ಖಾಂಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್ ಮೋಹನ್, ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ರಂಗರಾವ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‌‘ಪ್ರಾಣಿ, ಪಕ್ಷಗಳು ಇರುವುದು ಕೊಂದು ತಿನ್ನುವುದಕ್ಕಲ್ಲ. ಅವುಗಳ ಬದುಕನ್ನೂ ಗೌರವಿಸಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ 65ನೇ ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಅವರುಬುಧವಾರ ಮಾತನಾಡಿದರು.

‘20 ವರ್ಷಗಳಿಂದೀಚೆಗೆ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸಣ್ಣ–ಪುಟ್ಟ ಚಿಟ್ಟೆಗಳು ಹಾಗೂ ಕೆಲವು ಪಕ್ಷಿಗಳಂತೂ ಕಣ್ಮರೆಯಾಗಿವೆ. ಕಾಗೆ ಮತ್ತು ಪಾರಿವಾಳಗಳೂ ಹಿಂದಿನಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿಲ್ಲ. ಜನರಲ್ಲಿ ಪ್ರಾಣಿ ಪ್ರೀತಿ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣ’ ಎಂದರು.

ADVERTISEMENT

‘ಜನರು ಪ್ರಾಣಿ, ಪಕ್ಷಿಗಳ ಬಗ್ಗೆ ದಯೆ ಮತ್ತು ಕರುಣೆ ಬೆಳೆಸಿಕೊಂಡು ಅವುಗಳನ್ನು ರಕ್ಷಣೆ ಮಾಡಬೇಕು. ಇಲ್ಲದ್ದರೆ ಅವುಗಳನ್ನು ಉಳಿಸುವ ಕಾರ್ಯ ಯಶಸ್ವಿ ಆಗುವುದಿಲ್ಲ’ ಎಂದರು.

‘ಗುಜರಾತ್‌ನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಅವುಗಳಿಗೆ ಬೇಕಾದ ಆಹಾರ ಪೂರೈಕೆ ಮಾಡುತ್ತಿರುವುದು ಇದಕ್ಕೆ ಕಾರಣ. ವನ್ಯಜೀವಿಗಳನ್ನು ಉಳಿಸಲು ಕಾಡಿಗೇ ಹೋಗಬೇಕೆಂದಿಲ್ಲ. ಮನೆ ಸುತ್ತಮುತ್ತ ಬರುವ ಪ್ರಾಣಿ–ಪಕ್ಷಿಗಳಿಗೆ ಆಹಾರ ಒದಗಿಸಿದರೆ ಸಾಕು’ ಎಂದರು.

‘ರಾಜಭವನದಲ್ಲಿ ನೂರಾರು ಬೆಕ್ಕುಗಳಿವೆ. ಪಾರಿವಾಳಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ನಾವು ಅವುಗಳಿಗೆ ಆಹಾರ ಒದಗಿಸುತ್ತಿರುವ ಕಾರಣ ಅವು ಅಲ್ಲೇ ಇವೆ’ ಎಂದು ಹೇಳಿದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ರಾಜ್ಯಪಾಲರು ಬಹುಮಾನ ವಿತರಿಸಿದರು. ಕರ್ನಾಟಕದಲ್ಲಿ ವನ್ಯಜೀವಿ ನಿರ್ವಹಣೆ ಕುರಿತು ನಿವೃತ್ತ ಐಎಎಸ್ ಅಧಿಕಾರಿ ದೀಪಕ್ ಶರ್ಮಾ ಬರೆದಿರುವ ‘ವೈಡ್‍ಲೈಫ್ ಮ್ಯಾನೇಜ್‍ಮೆಂಟ್ ಇನ್ ಕರ್ನಾಟಕ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಅರಣ್ಯ ಇಲಾಖೆ ಸಹಕಾರದೊಂದಿಗೆ ಅರೋಚ ಸಂಸ್ಥೆ ಸಿದ್ಧಪಡಿಸಿರುವ ಆನೆ ಮತ್ತು ಮಾನವ ಸಂಘರ್ಷ ಕುರಿತ 35 ನಿಮಿಷಗಳ ‘ಡ್ರೈವಿಂಗ್ ಎಲಿಫೆಂಟ್’ ಸಾಕ್ಷ್ಯಾಚಿತ್ರವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.