ADVERTISEMENT

ಹೆಣ್ಣು ಮಕ್ಕಳು ಧೈರ್ಯವಾಗಿ ಮಾತನಾಡಬೇಕು: ಕಮಲಾ

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:57 IST
Last Updated 9 ಮೇ 2019, 19:57 IST
ಎಚ್.ಎಲ್.ಪುಷ್ಪಾ(ಎಡದಿಂದ), ಲೇಖಕರಾದ ಸಿ.ಕೆ.ರಾಮೇಗೌಡ, ಕಮಲಾ ಹಂಪನಾ, ಬಿ.ಕೃಷ್ಣಪ್ಪ ಮತ್ತು ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಅವರು ಅ.ನ.ಕೃಷ್ಣರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.      -ಪ್ರಜಾವಾಣಿ ಚಿತ್ರ
ಎಚ್.ಎಲ್.ಪುಷ್ಪಾ(ಎಡದಿಂದ), ಲೇಖಕರಾದ ಸಿ.ಕೆ.ರಾಮೇಗೌಡ, ಕಮಲಾ ಹಂಪನಾ, ಬಿ.ಕೃಷ್ಣಪ್ಪ ಮತ್ತು ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಅವರು ಅ.ನ.ಕೃಷ್ಣರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.      -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಕಾಲಿನ ವಿದ್ಯಮಾನಗಳ ಕುರಿತು ಹೆಣ್ಣು ಮಕ್ಕಳು ಧೈರ್ಯವಾಗಿ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಾಹಿತಿ ಕಮಲಾ ಹಂಪನಾ ಹೇಳಿದರು.

ಅ.ನ.ಕೃ. ಕನ್ನಡ ಸಂಘ ಆಯೋಜಿಸಿದ್ದ ‘ಅ.ನ.ಕೃಷ್ಣರಾಯರ ಜನ್ಮದಿನಾಚರಣೆ, ಅ.ನ.ಕೃ. ಪ್ರಶಸ್ತಿ ಪ್ರದಾನ ಹಾಗೂ ‘ಲಹರಿ’ ಕೃತಿ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಮಕ್ಕಳಿಗೆ ಭಯ ಕಾಡುತ್ತಿದೆ. ಮಾತನಾಡಿದರೆ ಸುರಕ್ಷಿತವಾಗಿ ಮನೆಗೆ ತಲುಪುವುದಿಲ್ಲ ಎಂಬ ಭೀತಿ ಮನೆಮಾಡಿದೆ. ಇದರಿಂದ ಹೊರಬರಬೇಕು’ ಎಂದು ಅವರು ಹೇಳಿದರು.

ADVERTISEMENT

‘ನನ್ನ ಮೊದಲ ಕಥಾಸಂಕಲನ ‘ನೆಕ್ಕಿತು ಹಾಲಿನ ಬಟ್ಟಲು’ ಅನ್ನು ಅ.ನ.ಕೃ. ಅವರೇ ಬಿಡುಗಡೆ ಮಾಡಿ, ಬರವಣಿಗೆಗೆ ಪ್ರೋತ್ಸಾಹಿಸಿದ್ದರು. ಮಕ್ಕಳು ಓದುವ ನಾಲ್ಕು ಪುಟ್ಟ ಪುಸ್ತಕಗಳನ್ನು ನನ್ನಿಂದ ಬರೆಸಿದ್ದರು’ ಎಂದು ನೆನಪಿಸಿಕೊಂಡರು.

ಕೃತಿ ಕುರಿತು ಲೇಖಕಿ ಎಚ್‌.ಎಲ್‌.ಪುಷ್ಪಾ, ‘ನವ ನಾಗರಿಕತೆಯ ನಾಜೂಕು ಸಮಸ್ಯೆಗಳು, ಧರ್ಮ–ರಾಜಕೀಯದ ಜಿಜ್ಞಾಸೆ, ನಾಡು–ನುಡಿಯ ಕುರಿತ ಬರಹಗಳು ಪುಸ್ತಕದಲ್ಲಿವೆ. ವಿಚಾರಪೂರಿತ ಈ ಪುಸ್ತಕದಲ್ಲಿ ಪೂರ್ವ ನಿರ್ಧಾರಿತ ಅಭಿಪ್ರಾಯಗಳನ್ನು ತಿಳಿಸಿಲ್ಲ. ಓದಿ ತೀರ್ಮಾನಿಸುವ ಆಯ್ಕೆಯನ್ನು ಓದುಗರಿಗೆ ನೀಡಲಾಗಿದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಕನ್ನಡಪರ ಹೋರಾಟಗಾರ ಬಿ.ಕೃಷ್ಣಪ್ಪ, ‘1970ರ ದಶಕದಲ್ಲಿ ನಗರದ ಕಂಟೋನ್ಮೆಂಟ್‌ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಬಂದು ನೆಲೆಸಲು ಆರಂಭಿಸಿದರು. ಆಗ ಆಡಳಿತ ವರ್ಗವೂ ಕನ್ನಡವನ್ನು ಕಡೆಗಣನೆ ಮಾಡಲು ಆರಂಭಿಸಿತ್ತು. ಹೀಗಾಗಿ, ನಾನು ಸಹ ಅ.ನ.ಕೃ. ಅವರೊಂದಿಗೆ ಹೋರಾಟಕ್ಕೆ ಇಳಿದೆ’ ಎಂದು ಸ್ಮರಿಸಿಕೊಂಡರು.

ಪ್ರಶಸ್ತಿಯು ₹ 5,000 ಒಳಗೊಂಡಿದೆ.

ಪುಸ್ತಕದ ಕುರಿತು
ಹೆಸರು: ಲಹರಿ
ಪ್ರಕಾಶನ: ನಿರಂತರ ಸಾಯಿ ಕಮ್ಯೂನಿಕೇಷನ್ಸ್‌
ಪುಟಗಳು: 324
ಬೆಲೆ: ₹ 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.