ಬೆಂಗಳೂರು: ‘ಕೋವಿಡ್ ಸೇವೆ ಮುಗಿಸಿ ನೇರವಾಗಿ ಮನೆಗೆ ಹೋಗುತ್ತೇನೆ. ಮಗನಿಂದ ಅಂತರ ಕಾಯ್ದುಕೊಂಡರೂ ನನ್ನದು ಪ್ರತ್ಯೇಕ ವಾಸ. ಕೋವಿಡ್ ಯುದ್ಧದಲ್ಲಿ ಹೋರಾಟ ಮಾಡುವಷ್ಟೇ ಗಮನ ಕುಟುಂಬದ ಕಾಳಜಿಯಲ್ಲೂ ಇದೆ’.
ಇದು, ಕೋವಿಡ್ ಸೇವೆಯಲ್ಲಿ ತೊಡಗಿರುವ ಶುಶ್ರೂಷಕ ಅಧಿಕಾರಿ ಲೀಲಾವತಿ ಅವರ ಮಾತುಗಳು.
‘ಕೋವಿಡ್ ಮೊದಲ ಅಲೆಯ ವೇಳೆ ಸೋಂಕಿತರೊಂದಿಗೆ ನೇರವಾಗಿ ಕೆಲಸ ಮಾಡಿದೆ. ಆಗ ಕೋವಿಡ್ ಕೆಲಸನನಗೂ ಹೊಸದು. ಅಷ್ಟೇ ಭಯವೂ ಇತ್ತು. ಆದರೆ, ಸೇವೆಯಿಂದ ಹಿಂಜರಿಯುವ ವೃತ್ತಿ ನನ್ನದಲ್ಲ. ಧೈರ್ಯವಾಗಿಯೇ ಕೋವಿಡ್ ಸೇವೆಯಲ್ಲಿ ತೊಡಗಿದೆ’.
‘ಪತಿ ಬೇರೆ ಊರಿನಲ್ಲಿದ್ದಾರೆ. ಮಗ ಮತ್ತು ನಾನು ಬೆಂಗಳೂರಿನಲ್ಲಿದ್ದೇವೆ. ಕಳೆದ ಕೋವಿಡ್ ಅವಧಿ ವೇಳೆ ಮಗನಿಂದ ದೂರ ಉಳಿಯುವುದು ಅನಿವಾರ್ಯವಾಯಿತು. ಅವನಿಗೆ ಮೂರು ಹೊತ್ತಿನ ಆಹಾರ ಸಿಗುವುದೇ ಚಿಂತೆಯಾಗಿತ್ತು. ಹೋಟೆಲ್ ವ್ಯವಸ್ಥೆಯೂ ಸರಿಯಾಗಿ ಇರಲಿಲ್ಲ. ಮೊಬೈಲ್ ಮೂಲಕ ಕರೆ ಮಾಡಿ, ಅಡುಗೆ ಮಾಡಲು ಸಲಹೆಗಳನ್ನು ನೀಡುತ್ತಿದ್ದೆ. ಅವನೂ ನನ್ನ ಸೇವೆಗೆ ಸಹಕಾರ ನೀಡಿದ್ದಾನೆ’.
‘ಆಗ ಎಲ್ಲರಲ್ಲೂ ಕೋವಿಡ್ ಭೀತಿ ಆವರಿಸಿದ್ದ ಸಮಯ. ನಾನು ಕೋವಿಡ್ ಸೇವೆಯಲ್ಲಿದ್ದೇನೆ ಎಂಬ ವಿಚಾರವನ್ನು ಮನೆಯವರನ್ನು ಬಿಟ್ಟು ಎಲ್ಲೂ ಹಂಚಿಕೊಳ್ಳಲಿಲ್ಲ. ಆಗ ನಮ್ಮನ್ನು ನೋಡುವ ದೃಷ್ಟಿಕೋನ ಬೇರೆಯೇ ಇತ್ತು. ನೆರೆಹೊರೆಯವರು ಕೇಳಿದಾಗ ಊರಿನಲ್ಲಿದ್ದೇನೆ ಎಂದು ಸುಳ್ಳು ಹೇಳಿದ್ದೆ. ಸೋಂಕಿತರ ಸಂಬಂಧಿಗಳು ಮೃತಪಟ್ಟಾಗ ಅವರನ್ನು ಕಾಣಲು ಹೊರಹೋಗಲಾರದೆ, ಆಸ್ಪತ್ರೆಯಲ್ಲೇ ಗೋಳಾಡುವುದನ್ನು ನನ್ನಿಂದ ನೋಡಲು ಆಗುತ್ತಿರಲಿಲ್ಲ’.
‘ಮೊದಲ ಹಾಗೂ ಎರಡನೇ ಅಲೆಯ ಸಂದರ್ಭಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಪಿಪಿಇ ಕಿಟ್ ಅನ್ನು ಗಂಟೆಗಟ್ಟಲೆ ಧರಿಸಿ, ನೇರವಾಗಿ ರೋಗಿಗಳೊಂದಿಗೆ ಸೇವೆ ಮಾಡುತ್ತಿದ್ದೆ. ಈಗ ಒಪಿಡಿ ಜೊತೆಗೆ ಆಸ್ಪತ್ರೆಗೆ ಬರುವ ಕೊರೊನಾ ರೋಗಿಗಳಿಗೆ ಮುಂಚಿತವಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡುತ್ತೇನೆ. ಈ ವೇಳೆಯೂ ಸೋಂಕು ಎಲ್ಲಿ, ಹೇಗೆ ಹರಡುವುದೋ ತಿಳಿಯುವುದಿಲ್ಲ. ಮನೆಗೆ ಹೋದ ಕೂಡಲೇ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತೇನೆ. ಮಗನೂ ನನಗೆ ಧೈರ್ಯ ತುಂಬುತ್ತಾನೆ’.
‘ಸಕಾರಾತ್ಮಕ ಚಿಂತನೆ, ಧೈರ್ಯದಿಂದ ಮುನ್ನಡೆಯುವ ಮನೋಭಾವ ಎಲ್ಲರಲ್ಲೂ ಮೂಡಿದರೆ, ಈ ಪರಿಸ್ಥಿತಿಯನ್ನು ನಿಯಂತ್ರಿಸಬಹುದು‘.
––
ಪರಿಚಯ
ಹೆಸರು:ಲೀಲಾವತಿ ಟಿ.
ಊರು:ಚಿತ್ರದುರ್ಗ
ವೃತ್ತಿ:ಶುಶ್ರೂಷಕ ಅಧಿಕಾರಿ
ಸೇವೆ:23 ವರ್ಷ
ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ:ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಬಸವೇಶ್ವರ ನಗರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.