ADVERTISEMENT

ಕುಟುಂಬದಿಂದ ಅಂತರ ಸವಾಲು: ಪ್ರಶಾಂತ್ ಗುತ್ತೇದಾರ್

ಶುಶ್ರೂಷಕರ ಅಂತರಂಗ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:04 IST
Last Updated 4 ಮೇ 2021, 5:04 IST
ಪ್ರಶಾಂತ್ ಗುತ್ತೇದಾರ್
ಪ್ರಶಾಂತ್ ಗುತ್ತೇದಾರ್   

ಬೆಂಗಳೂರು: ‘ಕೋವಿಡ್‌ ಮೊದಲನೇ ಅಲೆ ಸಂದರ್ಭದಲ್ಲಿ ಸೇವೆ ಮುಗಿದ ಬಳಿಕ ಸಿಬ್ಬಂದಿಗೆ ಪ್ರತ್ಯೇಕ ಕ್ವಾರಂಟೈನ್ ಹಾಗೂ ವಿಶ್ರಾಂತಿಗಾಗಿ ಸಮಯ ಸಿಗುತ್ತಿತ್ತು. ಆಗ ಕುಟುಂಬಸ್ಥರಿಂದ ದೂರವೇ ಉಳಿಯುತ್ತಿದ್ದೆ’.

‘ಸದ್ಯ ತೀವ್ರಗೊಂಡಿರುವ ಕೋವಿಡ್‌ನಿಂದ ಸಿಬ್ಬಂದಿಗೆ ಕ್ವಾರಂಟೈನ್‌ಗೆ ಪ್ರತ್ಯೇಕ ಸ್ಥಳವಿಲ್ಲ. ವಿಶ್ರಾಂತಿಗೂ ಸಮಯ ಸಾಕಾಗುತ್ತಿಲ್ಲ. ಕೋವಿಡ್‌ ಸೇವೆಯ ಪಾಳಿ ಮುಗಿದ ನಂತರ ನೇರವಾಗಿ ಮನೆಗೆ ಹೋಗಬೇಕಿದೆ. ಒಂದೇ ಮನೆಯಲ್ಲಿ ಕುಟುಂಬಸ್ಥರಿಂದ ಅಂತರ ಕಾಯ್ದುಕೊಳ್ಳುವುದೇ ಈಗ ಸವಾಲಾಗಿದೆ. ಸೋಂಕಿತರೊಂದಿಗೆ ಸಮಯ ಕಳೆಯುವ ನನ್ನಿಂದ ಮನೆಯವರಿಗೆ ಎಲ್ಲಿ ಅಪಾಯ ಎದುರಾಗುವುದೋ? ಎಂಬ ಭಯ ಸದಾ ಕಾಡುತ್ತದೆ‘.

‘ಕೋವಿಡ್ ಬಿಗಡಾಯಿಸಿರುವುದರಿಂದ ಆಸ್ಪತ್ರೆಗೆ ಬರುವ ಸೋಂಕಿತರ ಸಂಖ್ಯೆಯೂ ಹೆಚ್ಚು. ಈ ವೇಳೆ ಸಾಮಾನ್ಯವಾಗಿ ಸಿಬ್ಬಂದಿಗೆಕೆಲಸದ ಒತ್ತಡವೂ ಹೆಚ್ಚುತ್ತದೆ. ಕೋವಿಡ್ ಸೇವೆ ಮಾಡುವುದರಲ್ಲಿ ಹೆಮ್ಮೆ ಇದೆ. ಕುಟುಂಬದ ವಿಚಾರಕ್ಕೆ ಬಂದಾಗ ಅಷ್ಟೇ ಭಯವೂ ಇದೆ’.

ADVERTISEMENT

‘ಮನೆಯವರು ಹಲವು ಬಾರಿ ‘ಅಪಾಯದ ಈ ಕೆಲಸ ತೊರೆದು ಮನೆಯಲ್ಲೇ ಇರಿ, ಜೀವ ಇದ್ದರೆ ಏನಾದರೂ ಮಾಡಬಹುದು’ ಎಂದು ಹೇಳುತ್ತಲೇ ಇರುತ್ತಾರೆ. ಆದರೆ, ಈಗ ನಡೆಯುತ್ತಿರುವುದು ಕೋವಿಡ್ ಯುದ್ಧ. ಮನೆಯವರ ಮಾತು ಕೇಳಿ ಕೆಲಸ ಬಿಟ್ಟರೆ, ಯುದ್ಧದಿಂದ ಪಲಾಯನ ಮಾಡಿದಂತೆ ಹಾಗೂ ವೃತ್ತಿಗೂ ದ್ರೋಹ ಬಗೆದಂತೆ’.

‘ಆಸ್ಪತ್ರೆಗೆ ಬರುವ ರೋಗಿಗಳು ಮೊದಲೇ ಭೀತಿಯಲ್ಲಿರುತ್ತಾರೆ. ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ ಧೈರ್ಯ ತುಂಬುತ್ತೇವೆ. ತಮ್ಮ ಆರೋಗ್ಯ ರಕ್ಷಣೆ ತಮ್ಮ ಕೈಯಲ್ಲೇ ಎಂಬುದನ್ನು ಜನ ಮರೆಯಬಾರದು’.

‘ಕೋವಿಡ್‌ನಂತಹ ಕ್ಲಿಷ್ಟ ಸಂದರ್ಭದಲ್ಲೂ ಎದೆಗುಂದದೆ, ಕಾರ್ಯನಿರ್ವಹಿಸುತ್ತಿರುವ ನಮ್ಮಂತವರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಬಿಡುವಿಲ್ಲದೆ ಕೋವಿಡ್‌ ಸೇವೆ ಮಾಡುತ್ತಿರುವುದು ಸವಾಲಿನ ಕೆಲಸ. ಸರ್ಕಾರವೂ ನಮ್ಮನ್ನು ವಿಶೇಷವಾಗಿ ಪರಿಗಣಿಸಬೇಕು’.

‘ಕೋವಿಡ್ ಅವಧಿಯಲ್ಲಿ ವಿಶೇಷ ಭತ್ಯೆ, ಕುಟುಂಬದ ಆರೋಗ್ಯ ಜವಾಬ್ದಾರಿ, ಮೃತರಿಗೆ ನೆರವು ಸೇರಿದಂತೆ ನಮ್ಮ ಪರ ನಿಲ್ಲಬೇಕು.ಆಗ ಸೇವೆ ಮಾಡಲು ನಮಗೂ ಹೆಚ್ಚಿನ ಉತ್ಸಾಹ ಬರುತ್ತದೆ. ಈಗಿನ ಪರಿಸ್ಥಿತಿಯೇ ಮುಂದುವರಿದರೆ ಆರೋಗ್ಯ ಕಾಪಾಡುವ ಸಿಬ್ಬಂದಿಯ ಕೊರತೆ ಎದುರಾಗಲಿದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.