ADVERTISEMENT

‘ಪಕ್ಷಾಂತರ: ಕಾನೂನು–ಜನ ಬದಲಾಗಲಿ’

ಶಾಸಕರ ರಾಜೀನಾಮೆ ಹಕ್ಕು ಮತ್ತು ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:34 IST
Last Updated 16 ಆಗಸ್ಟ್ 2019, 19:34 IST
ಎಚ್.ಎನ್. ನಾಗಮೋಹನ್‌ ದಾಸ್, ಕೃಷ್ಣ ಬೈರೇಗೌಡ ಹಾಗೂ ವೈ.ಎಸ್.ವಿ. ದತ್ತ ಚರ್ಚಿಸಿದರು– ಪ್ರಜಾವಾಣಿ ಚಿತ್ರ
ಎಚ್.ಎನ್. ನಾಗಮೋಹನ್‌ ದಾಸ್, ಕೃಷ್ಣ ಬೈರೇಗೌಡ ಹಾಗೂ ವೈ.ಎಸ್.ವಿ. ದತ್ತ ಚರ್ಚಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಾಸಕರ ರಾಜೀನಾಮೆ ಹಕ್ಕು ಮತ್ತು ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಅಖಿಲ ಭಾರತ ವಕೀಲರ ಸಂಘದ ಬೆಂಗಳೂರು ಶಾಖೆಯು ಶುಕ್ರವಾರ ವಿಚಾರ ಸಂಕಿರಣ ಆಯೋಜಿಸಿತ್ತು. ಸಂಘದ ಜಿಲ್ಲಾ ಮುಖಂಡ ಶಿವಶಂಕರಪ್ಪ ವಿಷಯ ಮಂಡಿಸಿದರು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್‌ ದಾಸ್‌, ಶಾಸಕ ಕೃಷ್ಣ ಬೈರೇಗೌಡ, ಜೆಡಿಎಸ್‌ ಮುಖಂಡ ವೈ.ಎಸ್.ವಿ. ದತ್ತ ಅಭಿಪ್ರಾಯ ಹಂಚಿಕೊಂಡರು.

‘ನ್ಯಾಯಾಂಗ ತನಿಖೆಯಾಗಲಿ’

ನಾಗಮೋಹನ್‌ದಾಸ್‌:ಚುನಾಯಿತ ಪ್ರತಿನಿಧಿಗಳು ಅಧಿಕಾರದ ಆಸೆಗೆ ಪಕ್ಷಾಂತರ ಮಾಡುವುದಕ್ಕಿಂತ ದೇಶದ್ರೋಹದ ಕೆಲಸ ಮತ್ತೊಂದಿಲ್ಲ.

ADVERTISEMENT

lಪಕ್ಷಾಂತರದ ಹಿಂದೆ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ. ಅರ್ಹರಲ್ಲದವರ, ಯೋಗ್ಯರಲ್ಲದವರ ಅಧಿಕಾರ ದಾಹ ಇದಕ್ಕೆ ಕಾರಣ.

lಅಕ್ರಮವಾಗಿ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದವರಿಗೆ ಸಿಬಿಐ, ಇಡಿ ಮತ್ತು ಐಟಿ ದಾಳಿಯ ಬೆದರಿಕೆ ಒಡ್ಡಿ ಪಕ್ಷಾಂತರ ಮಾಡಿಸಲಾಗಿದೆ.

lವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರಂಕುಶ ವ್ಯವಸ್ಥೆಯನ್ನು ಸ್ಥಾಪಿಸುವ ಹುನ್ನಾರ ನಡೆಯುತ್ತಿದೆ.

lರಾಜೀನಾಮೆ ಕೊಡುವವರ ಹಿಂದೆ, ಕೊಡಿಸುವವರ ಪಾತ್ರವೂ ಇದೆ. ಇವೆರಡೂ ದೊಡ್ಡ ಅಪರಾಧಗಳೇ. ರಾಷ್ಟ್ರಮಟ್ಟದಲ್ಲಿ ನ್ಯಾಯಾಂಗ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ಪಕ್ಷಾಂತರ ನಿಷೇಧ ಕುರಿತು ಹೊಸ ಕಾನೂನು ರೂಪುಗೊಳ್ಳಬೇಕು.

‘ವಿಪಕ್ಷ ಮುಕ್ತ ಭಾರತವೇ ಬಿಜೆಪಿ ಹುನ್ನಾರ’

ಕೃಷ್ಣ ಬೈರೇಗೌಡ:ಒಂದು ಪಕ್ಷದ ಬಿ ಫಾರಂ ಪಡೆದು ಚುನಾವಣೆಗೆ ಸ್ಪರ್ಧಿಸಿದ ಮೇಲೆ ಆ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿಗೆ ಇದೆ ಎಂದೇ ಅರ್ಥ. ಆದರೆ, ಮಂತ್ರಿಯಾಗುವ ಆಸೆಯಿಂದಲೇ ರಾಜೀನಾಮೆ ನೀಡಿದ್ದಾರೆ. ಎಂಥದ್ದೇ ಕಾನೂನು ರೂಪಿಸಿದರೂ, ಸರಿಯಾಗಿ ಪಾಲನೆಯಾಗದಿದ್ದರೆ ಪ್ರಯೋಜನವಿಲ್ಲ.

lಯಾವ ಪಕ್ಷವೂ ಸಾಚಾ ಅಲ್ಲ. ಎಲ್ಲ ಪಕ್ಷಗಳಲ್ಲಿಯೂ ಪಕ್ಷಾಂತರ ನಡೆದಿದೆ. ಆದರೆ, ‘ವಿಪಕ್ಷ ಮುಕ್ತ ಭಾರತ’ವನ್ನು ಮಾಡುವ ಕೆಲಸ ಈಗ ನಡೆಯುತ್ತಿದೆ. ಇದು ವಿಪಕ್ಷಗಳ ಮೇಲಿನ ದಾಳಿ ಎನ್ನುವುದಕ್ಕಿಂತ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ, ಸಂವಿಧಾನದ ಮೇಲಿನ ದಾಳಿ ಎನ್ನುವುದು ಸೂಕ್ತ.

lಸಿಂಗಪುರದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಡಳಿತ ಪಕ್ಷವೇ ಆಯ್ಕೆ ಮಾಡುತ್ತದೆ. ಭಾರತದಲ್ಲಿಯೂ ಇದೇ ವ್ಯವಸ್ಥೆ ತಂದರೂ ಅಚ್ಚರಿಯಿಲ್ಲ. ಬಿಜೆಪಿಯ ‘ಬಿ ಟೀಂ’ ಪಕ್ಷಗಳನ್ನೇ ವಿರೋಧ ಪಕ್ಷಗಳಂತೆ ಕೂರಿಸಿ ಆಡಳಿತ ನಡೆಸುವ ದಿನಗಳೂ ದೂರವಿಲ್ಲ.

‘ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ಸಾವು’

ವೈಎಸ್‌ವಿ ದತ್ತ: ‘ಯಾವುದೇ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಕೃಷ್ಣ ಬೈರೇಗೌಡ ಎಷ್ಟೇ ಸಮರ್ಥರಾದರೂ, ಪತ್ರಕರ್ತರು ಪ್ರಶ್ನಿಸಿದರೆ ‘ಹೈಕಮಾಂಡ್‌ ಸೂಚಿಸಿದ ನಂತರ ಪ್ರತಿಕ್ರಿಯಿಸುತ್ತೇನೆ’ ಎನ್ನುತ್ತಾರೆ, ಅದೇ ರೀತಿ ನಾನು ‘ದೇವೇಗೌಡರಿಗೆ ಕೇಳಿ ಹೇಳುತ್ತೀನಿ’ ಎನ್ನಬೇಕಾದ ಅನಿವಾರ್ಯತೆ ಇದೆ.

lಕಾನೂನಿಗಿಂತ ಮಿಗಿಲಾದುದು ಜನಶಕ್ತಿ. ಚುನಾಯಿತ ಪ್ರತಿನಿಧಿಗಳು ಅಷ್ಟು ಧೈರ್ಯವಾಗಿ ರಾಜೀನಾಮೆ ನೀಡಿದ್ದಕ್ಕೆ ಕಾರಣ ಜನರ ಭಯ ಇಲ್ಲದಿರುವುದು. ಅವರು ಅಡ್ಡದಾರಿ ಹಿಡಿಯಲು ಒಂದು ರೀತಿಯಲ್ಲಿ ಮತದಾರರೇ ಕಾರಣ.

lಈಗ ಅನರ್ಹಗೊಂಡಿರುವ ಶಾಸಕರು ಮುಂದಿನ ಚುನಾವಣೆಯಲ್ಲಿ ಗೆದ್ದರೆ, ಪಕ್ಷಾಂತರ ನಿಷೇಧದಂತಹ ಕಾನೂನುಗಳನ್ನು ತಿಪ್ಪೆಗೆ ಎಸೆಯಬೇಕಾಗುತ್ತದೆ.

lಚುನಾವಣಾ ಪದ್ಧತಿ ಸುಧಾರಣೆಯಾಗಬೇಕು. ರಾಜ್ಯದ ಹಣದಿಂದಲೇ ಚುನಾವಣೆಗಳು ನಡೆಯಬೇಕು ಹಾಗೂ ಗೆಲ್ಲುತ್ತಾನೋ, ಸೋಲುತ್ತಾನೋ ಪ್ರಾಮಾಣಿಕ, ಸಜ್ಜನ ಅಭ್ಯರ್ಥಿಗಳಿಗೆ ಪಕ್ಷಗಳು ಟಿಕೆಟ್‌ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.