ADVERTISEMENT

ಬಿಜೆಪಿಯಿಂದ ಜನವಿರೋಧಿ ಆಡಳಿತ

ಆಳಂದದಲ್ಲಿ ಪ್ರಜಾಧ್ವನಿ ಯಾತ್ರೆ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 6:00 IST
Last Updated 8 ಫೆಬ್ರುವರಿ 2023, 6:00 IST
ಆಳಂದದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು
ಆಳಂದದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು   

ಆಳಂದ: ‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆಡಳಿತ ಹಾಗೂ ಯೋಜನೆಗಳು ಸಂಪೂರ್ಣ ಜನ ವಿರೋಧಿ ಆಗಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆ ಯಲ್ಲಿ ಮಂಗಳವಾರ ಆಳಂದ ಮತ್ತು ಮಾದನ ಹಿಪ್ಪರಗಾ ಬ್ಲಾಕ್‌ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್‌ ತರುವ ಭರವಸೆ ಹುಸಿಯಾಗಿದೆ. ಅಚ್ಛೆ ದಿನಗಳು ಹಗಲುಗನಸಾಗಿದೆ. ರೈತರು, ಬಡವರು, ಮಹಿಳೆಯರು ಮತ್ತು ಕೂಲಿಕಾರ್ಮಿಕರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬಿ.ಆರ್.ಪಾಟೀಲ ಜನಪರ ಚಿಂತನೆಗಳುಳ್ಳ ಹೋರಾಟಗಾರ. ಯಾವುದೇ ಕಾರಣಕ್ಕೂ ಅವರನ್ನು ಸೋಲಿಸಬಾರದು. ಅವರಿಗೆ ಮುಂದೆ ಉತ್ತಮ ಭವಿಷ್ಯವಿದೆ’ ಎಂದರು.

ಶಾಸಕ ಪ‍್ರಿಯಾಂಕ್‌ ಖರ್ಗೆ ಮಾತನಾಡಿ, ‘ರಾಜ್ಯದಲ್ಲಿ ಶೇ 40 ಸರ್ಕಾರ ಇದ್ದರೆ, ಆಳಂದದಲ್ಲಿ ಶೇ 100 ರಷ್ಟು ಲೂಟಿ ಮಾಡಿದ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವೇ ಬಿಜೆಪಿ ಸಾಧನೆಯಾಗಿದೆ’ ಎಂದು ಟೀಕಿಸಿದರು.

ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ನಾನು ಶಾಸಕನಿದ್ದಾಗ ಮಂಜೂರಾದ ಭೀಮಾ ನದಿಯಿಂದ ಅಮರ್ಜಾ ಅಣೆಕಟ್ಟೆ ಭರ್ತಿ, ಸಿರಪುರ ಮಾದರಿ ಜಲಸಂಗ್ರಹ ಮತ್ತಿತರ ಶಾಶ್ವತ ಅಭಿವೃದ್ಧಿ ಸ್ಥಗಿತವಾಗಿವೆ. ತೊಗರಿ ಬೆಳೆ ಹಾನಿ, ನೆಟೆರೋಗ, ಅತಿವೃಷ್ಟಿ ಮತ್ತಿತರ ಗಂಭೀರ ಸಮಸ್ಯೆಗಳಿಗೂ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಇದರಿಂದ ಕ್ಷೇತ್ರಕ್ಕೆ ಪರಿಹಾರ ಬಿಡುಗಡೆ ಆಗಿಲ್ಲ’ ಎಂದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಶ್ರೀಧರ ಬಾಬು, ಶರಣಪ್ಪ ಮಟ್ಟೂರು, ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಜರ್ ಹುಸೇನ್‌, ಬ್ಲಾಕ್‌ ಅಧ್ಯಕ್ಷರಾದ ಶರಣಗೌಡ ಪಾಟೀಲ, ಅನೀಲ ರಾಜೋಳೆ, ಕೆಎಂಎಫ್‌ ಅಧ್ಯಕ್ಷ ಆರ್.ಕೆ. ಪಾಟೀಲ, ಸಿದ್ಧರಾಮ ಪ್ಯಾಟಿ, ಗುರುಶರಣ ಪಾಟೀಲ, ರಾಜಶೇಖರ ಪಾಟೀಲ ಚಿತಲಿ, ಅಶೋಕ ಸಾವಳೇಶ್ವರ, ದತ್ತರಾಜ ಗುತ್ತೇದಾರ, ಶಿವಪುತ್ರಪ್ಪ ಪಾಟೀಲ, ರೇವಣಪ್ಪ ನಾಗೂರೆ, ಸಲೀಂ ಸಗರಿ, ಅಹ್ಮದ್‌ ಅಲಿ ಚುಲಬುಲ್‌, ರವೀಂದ್ರ ಕೊರಳ್ಳಿ, ಸಿದ್ದಣ್ಣಾ ಮಾಸ್ತರ ಶೇಗಜೀ, ಬಸವರಾಜ ಪವಾಡಶೆಟ್ಟಿ, ಸುಭಾಷ ಪೌಜಿ ಇದ್ದರು.

ಈ ಮೊದಲು ಪಟ್ಟಣದ ಬಸ್‌ ನಿಲ್ದಾಣದ ಮಾರ್ಗವಾಗಿ ತೆರೆದ ವಾಹನದಲ್ಲಿ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಪ್ರಿಯಾಂಕ್‌ ಖರ್ಗೆ, ಬಿ.ಆರ್. ಪಾಟೀಲ, ಡಾ.ಶರಣಪ್ರಕಾಶ ಪಾಟೀಲ ಅವರನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಸಿದ್ದರಾಮಯ್ಯನವರು ಲಂಬಾಣಿ ಮಹಿಳೆಯರ ನೃತ್ಯಕ್ಕೆ ವೇದಿಕೆ ಮೇಲೆ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.