ADVERTISEMENT

ಈ ಉಕ್ಕಿನ ಬಟ್ಟೆ ವಿಕಿರಣ ನಿರೋಧಕ!

ಬೆಂಗಳೂರಿನ ‘ಐಟಿಐಇ ನಾಲೆಜ್‌ ಸಲ್ಯೂಷನ್ಸ್‌’ ಸಂಸ್ಥೆಯ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:13 IST
Last Updated 19 ನವೆಂಬರ್ 2019, 2:13 IST
ಪುಟ್ಟ ಇಸಿಜಿ ಯಂತ್ರ, ಬ್ರೇನ್‌ ಕಂಪ್ಯೂಟರ್‌ ಇಂಟರ್‌ಫೇಸ್‌ ಸಾಧನ, ಉಷ್ಣ ನಿಯಂತ್ರಕ ಜಾಕೆಟ್‌, ಪೋರ್ಟೆಬಲ್‌ ಕ್ಷ–ಕಿರಣ ಯಂತ್ರ ಹಾಗೂ ವಿಕಿರಣ ನಿರೋಧಕ ಬಟ್ಟೆಯನ್ನು ಡಾ.ಸಂಜೀವ ಕುಬಕಡ್ಡಿ (ಎಡ ತುದಿ) ಮತ್ತು ಅವರ ತಂಡದ ಸದಸ್ಯರು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಪುಟ್ಟ ಇಸಿಜಿ ಯಂತ್ರ, ಬ್ರೇನ್‌ ಕಂಪ್ಯೂಟರ್‌ ಇಂಟರ್‌ಫೇಸ್‌ ಸಾಧನ, ಉಷ್ಣ ನಿಯಂತ್ರಕ ಜಾಕೆಟ್‌, ಪೋರ್ಟೆಬಲ್‌ ಕ್ಷ–ಕಿರಣ ಯಂತ್ರ ಹಾಗೂ ವಿಕಿರಣ ನಿರೋಧಕ ಬಟ್ಟೆಯನ್ನು ಡಾ.ಸಂಜೀವ ಕುಬಕಡ್ಡಿ (ಎಡ ತುದಿ) ಮತ್ತು ಅವರ ತಂಡದ ಸದಸ್ಯರು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ಮಾರ್ಟ್‌ಪೋನ್‌, ಟೆಲಿಕಾಂ ಕಂಪನಿಗಳ ಗೋಪುರಗಳು, ವೈ–ಫೈ ಸಾಧನ, ಮೈಕ್ರೋವೇವ್‌ ಓವನ್‌... ಹೀಗೆ ವಿವಿಧ ಮೂಲಗಳಿಂದ ಹೊರಹೊಮ್ಮುವ ವಿಕಿರಣ ದೇಹದಲ್ಲಿ ಸೇರಿಕೊಳ್ಳದಂತೆ ತಡೆಯಲು ಸಾಧ್ಯವೇ?

ಈ ಸಲುವಾಗಿಯೇ ಬೆಂಗಳೂರಿನ ‘ಐಟಿಐಇ ನಾಲೆಜ್‌ ಸಲ್ಯೂಷನ್ಸ್‌’ ಸಂಸ್ಥೆ ಸ್ಮಾರ್ಟ್‌ ಬಟ್ಟೆಯೊಂದನ್ನು ಅಭಿವೃದ್ಧಿಪಡಿಸಿದೆ.

‘ಸತತವಾಗಿ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್‌ನಂತಹ ರೋಗಗಳು ಬರುವ ಸಾಧ್ಯತೆ ಇದೆ. ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ಇಂತಹ ವಿಕಿರಣಗಳಿಂದ ಹೆಚ್ಚಿನ ಅಪಾಯ ಎದುರಿಸುತ್ತಾರೆ. ಹಾಗಾಗಿ, ನವಜಾತ ಶಿಶು ಹಾಗೂ ಗರ್ಭಿಣಿಯರ ಬಳಕೆ ಸಲುವಾಗಿ ವಿಕಿರಣ ನಿರೋಧಕ ಬಟ್ಟೆಗಳನ್ನು ಸಿದ್ಧಗೊಳಿಸಿದ್ದೇವೆ’ ಎಂದು ಸಂಸ್ಥೆಯ ಸಂಸ್ಥಾಪಕ ಡಾ.ಸಂಜೀವ ಕುಬಕಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಬಟ್ಟೆಯನ್ನು ಕಲೆರಹಿತ ಉಕ್ಕಿನಿಂದ (ಸ್ಟೈನ್‌ಲೆಸ್‌ ಸ್ಟೀಲ್‌) ತಯಾರಿಸಲಾಗಿದ್ದರೂ ಇದನ್ನು ಇತರ ಬಟ್ಟೆಯಂತೆ ಮಡಚಬಹುದು. ನವಜಾತ ಶಿಶುವಿಗೆ ಹೊದಿಸಲು ತಯಾರಿಸಿದ ಬಟ್ಟೆಗೆ ₹ 1500 ದರ ನಿಗದಿಪಡಿಸಿದ್ದೇವೆ. ಗರ್ಭಿಣಿಯರು ಬಳಸುವ ಬಟ್ಟೆಗೆ ವಿನ್ಯಾಸ ಹಾಗೂ ಗಾತ್ರದ ಆಧಾರದಲ್ಲಿ ದರ ನಿಗರಿಪಡಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

ಡಿಜಿಟಲ್‌ ಕ್ಷ–ಕಿರಣ ಯಂತ್ರ: ಸಂಸ್ಥೆಯು ಕ್ಯಾಮೆರಾ ಗಾತ್ರದ ಡಿಜಿಟಲ್‌ ಕ್ಷ–ಕಿರಣ (ಎಕ್ಸ್‌ ರೇ) ಪೋರ್ಟೆಬಲ್‌ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಆ್ಯಂಬುಲೆನ್ಸ್‌ನಲ್ಲಿ ಇಟ್ಟುಕೊಂಡು ರೋಗಿಯ ನಿರ್ದಿಷ್ಟ ಭಾಗಗಳ ಎಕ್ಸ್‌ ತೆಗೆಯಲು ಇದು ಸಹಕಾರಿ. ಇದರಿಂದ ತೆಗೆದ ಚಿತ್ರಗಳನ್ನು ವೈ–ಫೈ ಸೌಲಭ್ಯ ಬಳಸಿ ನೇರವಾಗಿ ಸಂಬಂಧಪಟ್ಟ ವೈದ್ಯರಿಗೆ ರವಾನಿಸಬಹುದು.

‘ಈ ಯಂತ್ರವು ಮಾಮೂಲಿ ಎಕ್ಸ್‌ ರೇ ಯಂತ್ರಗಳಿಗಿಂತ ನೂರು ಪಟ್ಟು ಕಡಿಮೆ ವಿಕಿರಣವನ್ನು ಹೊರಸೂಸುತ್ತದೆ. ಇದು ಹೆಚ್ಚು ಸುರಕ್ಷಿತ. ಇದರ ಬೆಲೆ ತುಸು ದುಬಾರಿ. ಎಕ್ಸ್‌– ರೇ ತೆಗೆಯುವಾಗ ಬಳಸುವ ಪ್ರತಿಫಲಕವೂ ಸೇರಿ ₹ 20 ಲಕ್ಷರಿಂದ ₹ 30 ಲಕ್ಷದವರೆಗೆ ದರ ಇದೆ’ ಎಂದು ಡಾ. ಕುಬಕಡ್ಡಿ ತಿಳಿಸಿದರು.

ಮನೆಯಲ್ಲೇ ಇಸಿಜಿ ತೆಗೆಯುವ ಸಲುವಾಗಿ ಪುಟ್ಟನಿಸ್ತಂತು ಸಾಧನವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಒಮ್ಮೆ ಬಳಸಬಹುದಾದ ಈ ಸಾಧನವು ಮೊಬೈಲ್‌ ಆ್ಯಪ್‌ ನೆರವಿನಿಂದ ವೈದ್ಯರಿಗೆ ಇಸಿಜಿ ಕುರಿತ ದಾಖಲೆಗಳನ್ನು ರವಾನಿಸಬಲ್ಲುದು. ಒಮ್ಮೆ ಮಾತ್ರ ಬಳಸಬಹುದಾದ ಈ ಸಾಧನಕ್ಕೆ ₹ 5ಸಾವಿರ ದರ ಇದೆ.

ಅಂಗವಿಕಲರಿಗೆ ನೆರವಾಗುವ ಉದ್ದೇಶದಿಂದ ವ್ಯಕ್ತಿಯ ಆಲೋಚನೆಯನ್ನು ಆಧರಿಸಿ ಸಣ್ಣ ಪುಟ್ಟ ಕಾರ್ಯನಿರ್ವಹಿಸುವ ‘ಬ್ರೇನ್‌ ಕಂಪ್ಯೂಟರ್‌ ಇಂಟರ್‌ಫೇಸ್‌’ ಸಾಧನವನ್ನೂ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ.

ಉಷ್ಣ ನಿಯಂತ್ರಕ ಜಾಕೆಟ್‌

ಐಟಿಐಇ ನಾಲೆಜ್‌ ಸಲ್ಯೂಷನ್ಸ್‌ ಸಂಸ್ಥೆಯು ತೀವ್ರ ಚಳಿಯಲ್ಲೂ ದೇಹವನ್ನು ಬೆಚ್ಚಗಿಡುವ ಜಾಕೆಟ್‌ ಅನ್ನು ಕೂಡಾ ಸಿದ್ಧಪಡಿಸಿದೆ. ಜಾಕೆಟ್‌ ಧರಿಸಿದ ಕೆಲವೇ ನಿಮಿಷದಲ್ಲಿ ಬೆಚ್ಚಗಾಗುತ್ತಾ ಹೋಗುತ್ತದೆ. ಅದು ಎಷ್ಟು ಬೆಚ್ಚಗಾಗಬೇಕು ಎಂಬುದನ್ನು ನಾವೇ ನಿರ್ಧರಿಸಿ ಅದಕ್ಕೆ ತಕ್ಕಂತೆ ಉಷ್ಣಾಂಶವನ್ನು ನಿಗದಿಪಡಿಸಬಹುದು. ಬ್ಯಾಟರಿಯನ್ನು ಚಾರ್ಜ್‌ ಮಾಡಿ ಮತ್ತೆ ಬಳಸಬಹುದು.

‘ಸಿಯಾಚಿನ್‌ನಂತಹ ಶೀತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಇದು ಹೆಚ್ಚು ಉಪಯುಕ್ತ. ನವದೆಹಲಿಯಂತಹ ನಗರಗಳಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ತೀವ್ರ ಕುಸಿತ ಕಾಣುತ್ತದೆ. ಅಂತಹ ಪ್ರದೇಶದಲ್ಲಿ ನೆಲೆಸುವವರು ಇದನ್ನು ಬಳಸಬಹುದು. ಇದಕ್ಕೆ ₹ 4ಸಾವಿರದಿಂದ ₹ 5 ಸಾವಿರ ದರ ಇದೆ’ ಎಂದುಡಾ.ಸಂಜೀವ ಕುಬಕಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.