ADVERTISEMENT

ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸಮಾರಂಭಕ್ಕಿಲ್ಲ ಅವಕಾಶ

ಆರ್‌ಡಬ್ಲ್ಯುಎಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 3:19 IST
Last Updated 15 ಜೂನ್ 2021, 3:19 IST

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕೋವಿಡ್‌ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದಂತೆ ಬಿಬಿಎಂಪಿ ಸೋಮವಾರ ಮತ್ತೊಮ್ಮೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅಪಾರ್ಟ್‌ಮೆಂಟ್ ಸಮುಚ್ಚಯಗಳ ಆವರಣಗಳಲ್ಲಿ ಹುಟ್ಟಿದ ಹಬ್ಬ ಮತ್ತಿತರ ಸಭೆ ಸಮಾರಂಭಗಳನ್ನು, ಕಿಟ್ಟಿ ಪಾರ್ಟಿಗಳನ್ನು ಏರ್ಪಡಿಸುವಂತಿಲ್ಲ. ವ್ಯಾಯಮಶಾಲೆ, ಕ್ರೀಡಾ ಸೌಕರ್ಯ, ಈಜುಕೊಳ, ಮನರಂಜನಾ ಕ್ಲಬ್‌ಗಳ ಬಳಕೆಗೂ ಅವಕಾಶವಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ನಿಗದಿಪಡಿಸಿದ್ದ ನಿಯಮಗಳು ಈ ಮಾರ್ಗಸೂಚಿಯಲ್ಲೂ ಮುಂದುವರಿದಿವೆ. ಪ್ರಮುಖ ನಿಯಮಗಳು ಇಂತಿವೆ.

ADVERTISEMENT

* ನಿವಾಸಿಗಳೆಲ್ಲರೂ ಬಳಸುವ ಸಾಮಾನ್ಯ ಪ್ರದೇಶಗಳನ್ನು, ಲಿಫ್ಟ್‌ಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು.

* ಸ್ವಚ್ಛತಾ ಕಾರ್ಮಿಕರ ಆರೋಗ್ಯ ರಕ್ಷಣೆ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು (ಆರ್‌ಡಬ್ಲ್ಯುಎ) ಕಾಳಜಿವಹಿಸಬೇಕು.

* ನಿವಾಸಿಗಳಲ್ಲಿ ಆತಂಕ ಹುಟ್ಟಿಸುವಂತಹ ವದಂತಿಗಳನ್ನು ಹಬ್ಬಿಸಲು ಅವಕಾಶ ನೀಡಬಾರದು. ಏನೇ ಕ್ರಮಗಳ ಅಗತ್ಯವಿದ್ದರೂ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬೇಕು.

* ಸೋಂಕು ಪತ್ತೆಯಾದ ಸಂದರ್ಭದಲ್ಲಿ ಕಂಟೈನ್‌ಮೆಂಟ್‌ ಯೋಜನೆ ಜಾರಿಗೆ ಸಹಕರಿಸಬೇಕು.

* ಪ್ರತ್ಯೇಕವಾಸಕ್ಕೆ ಸೂಚಿಸಲಾದ ನಿವಾಸಿಗಳು ಮನೆಯಿಂದ ಹೊರಗೆ ಅಡ್ಡಾಡದಂತೆ ಆರ್‌ಡಬ್ಲ್ಯುಎಗಳು ನಿಗಾ ವಹಿಸಬೇಕು.

* ಸೋಂಕಿನ ಲಕ್ಷಣ ಕಂಡುಬಂದ ತಕ್ಷಣನಿವಾಸಿಗಳು ಆರೋಗ್ಯ ಸಹಾಯವಾಣಿಯನ್ನು (104) ಸಂಪರ್ಕಿಸಬೇಕು.

* ಸೋಂಕಿತರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಆರೋಗ್ಯ ವಿಭಾಗದ ಸಿಬ್ಬಂದಿ ಜೊತೆ ಹಂಚಿಕೊಳ್ಳಬೇಕು.

* ಮಕ್ಕಳು ಹೊರಗಡೆ ಗುಂಪು ಕಟ್ಟಿಕೊಂಡು ಆಡುವುದಕ್ಕೆ ಅವಕಾಶ ನೀಡಬಾರದು.

* 60 ವರ್ಷ ಮೇಲ್ಪಟ್ಟವರು, ಕ್ಯಾನ್ಸರ್, ಮಧುಮೇಹದಂತಹ ಕಾಯಿಲೆವುಳ್ಳವರು ಮನೆಯೊಳಗೇ ಇರುವಂತೆ ಉತ್ತೇಜಿಸಬೇಕು

* ಎಲ್ಲ ನಿವಾಸಿಗಳಿಗೆ, ಸ್ವಚ್ಛತಾ ಸಿಬ್ಬಂದಿಗೆ, ಭದ್ರತಾ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಕೊಡಿಸಲು ಕ್ರಮ ಕೈಗೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.