ADVERTISEMENT

ಹೃದಯ ಕಾಯಿಲೆ ಪತ್ತೆಗೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 19:57 IST
Last Updated 6 ಜುಲೈ 2022, 19:57 IST

ಬೆಂಗಳೂರು: ಹೃದಯ ಕಾಯಿಲೆಗಳ ಅಪಾಯದ ಬಗ್ಗೆ ಮುನ್ಸೂಚನೆ ನೀಡಲು ಅಪೋಲೊ ಆಸ್ಪತ್ರೆಯು ಸಿಂಗಪುರದ ಕನೆಕ್ಟೆಡ್‌ ಲೈಫ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ವರ್ಚುವಲ್ ವೇದಿಕೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿಅಪೋಲೊ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಮಾತನಾಡಿ,‘ಆಸ್ಪತ್ರೆಯ ಸಾಧನವನ್ನು ಕಂಪನಿಯ ಆ್ಯಪ್‌ನೊಂದಿಗೆ ಸಂಪರ್ಕಿಸಲಾಗುತ್ತಿದೆ. ಕಾಯಿಲೆಯ ಗಂಭೀರತೆ ಅರಿಯಲು ಈ ಒಪ್ಪಂದ ಸಹಕಾರಿ. ಮುಂಚಿತವಾಗಿ ರೋಗ ನಿರ್ಣಯಿಸಿ, ಚಿಕಿತ್ಸೆಯನ್ನೂ ಒದಗಿಸಬಹುದು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ಚಿಕಿತ್ಸೆಗಳು ಸುಲಭವಾಗುತ್ತಿವೆ’ ಎಂದು ಹೇಳಿದರು.

‘ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಳವಾಗುತ್ತಿವೆ. ಹೆಚ್ಚಿನ ಜನರು ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನವರಿಗೂ ಹೃದಯಾಘಾತವಾಗುತ್ತಿರುವುದು ಆತಂಕಕಾರಿ. ಸಾಂಕ್ರಾಮಿಕವಲ್ಲದ ರೋಗಗಳಿಂದ ಆರ್ಥಿಕ ಸಂಕಷ್ಟವೂ ಎದುರಾಗುತ್ತದೆ. ರೋಗ ಉಲ್ಬಣಿಸಿದಾಗ ಚಿಕಿತ್ಸೆ ನೀಡಿದರೆ ವೆಚ್ಚ ಅಧಿಕವಾಗುತ್ತದೆ. ಆದ್ದರಿಂದಪ್ರಾರಂಭಿಕ ಹಂತದಲ್ಲಿಯೇ ರೋಗ ನಿರ್ಣಯಿಸಿ, ಚಿಕಿತ್ಸೆ ಒದಗಿಸಬೇಕು. ಆಗ ರೋಗಿಯೂ ಬೇಗ ಚೇತರಿಸಿಕೊಳ್ಳುತ್ತಾನೆ’ ಎಂದು ತಿಳಿಸಿದರು.

ADVERTISEMENT

ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ, ‘ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ವೈದ್ಯರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನೂ ಸುಲಭವಾಗಿ ನಡೆಸಲು ಸಾಧ್ಯ. ತಂತ್ರಜ್ಞಾನದ ನೆರವಿನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕಾರಗಳೂ ಹೆಚ್ಚಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.