ಬೆಂಗಳೂರು: ಕೋರಮಂಗಲದ ಕೇಂದ್ರೀಯ ಸದನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡ ಸಂಘದ ಕಚೇರಿಯನ್ನು ಅಲ್ಲಿಯೇ ಉಳಿಸುವಂತೆ ಸಂಘದ ನಿಯೋಗವು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಗರದಲ್ಲಿ ಶನಿವಾರ ಮನವಿ ಸಲ್ಲಿಸಿತು.
ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಪರ ಹೋರಾಟಗಾರರಾದ ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ. ಚಂದ್ರಶೇಖರ್ ಅವರನ್ನು ಒಳಗೊಂಡ ನಿಯೋಗವು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಸಿತು.
‘ಕೇಂದ್ರೀಯ ಸದನದ 8ನೇ ಮಹಡಿಯಲ್ಲಿ ಸಂಘದ ಕಚೇರಿಯಿದ್ದು, ಎರಡು ದಶಕಗಳಿಂದ ರಚನಾತ್ಮಕ ಕನ್ನಡ ಕೆಲಸ ಮಾಡುತ್ತಿದೆ. ಈಗ ಬಂದಿರುವ ಕನ್ನಡೇತರ ಅಧಿಕಾರಿಗಳು ಸಂಘವು ಅನಧಿಕೃತವಾಗಿ ಕಚೇರಿ ಆಕ್ರಮಿಸಿಕೊಂಡಿದೆ ಎಂದು ಆದೇಶ ಪತ್ರನೀಡಿ, ಕಚೇರಿ ತೆರವುಗೊಳಿಸಿದ್ದಾರೆ. ಕಚೇರಿಯಲ್ಲಿದ್ದ ವಸ್ತುಗಳನ್ನು ಪಡಸಾಲೆಗೆ ಹಾಕಿದ್ದಾರೆ. ಈ ಕಚೇರಿಯನ್ನು ಅಲ್ಲಿಯೇ ಉಳಿಸಿಕೊಡಬೇಕು’ ಎಂದು ಕೋರಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಚ್.ಡಿ. ಕುಮಾರಸ್ವಾಮಿ, ‘ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿ, ಸಂಘದ ಕಚೇರಿ ಉಳಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.