‘ನಾಮದೇವ ಸಿಂಪಿ’ ಎಂದೇ ನಮೂದಿಸಿ
ಬೆಂಗಳೂರು: ‘ನಾಮದೇವ ಸಿಂಪಿ ಸಮಾಜದವರು ಜಾತಿ ಜನಗಣತಿ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ನಾಮದೇವ ಸಿಂಪಿ ಎಂದೇ ನಮೂದಿಸಬೇಕು’ ಎಂದು ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜ ತಿಳಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ್ ವಿ. ಕೊಪರ್ಡೆ, ‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಕುರಿತು ನಿಖರ ಮಾಹಿತಿ ಪಡೆದುಕೊಳ್ಳಲು ಸಮೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಕುಲಕಸುಬು ಕಾಲಂನಲ್ಲಿ ದರ್ಜಿ, ನೇಕಾರಿಕೆ ಎಂದು ನಮೂದಿಸಬೇಕು. ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ನೈಜ ಜಾತಿಯನ್ನು ಬರೆಸಬೇಕು’ ಎಂದು ಮನವಿ ಮಾಡಿದರು.
ರಾಷ್ಟ್ರೀಯ ಸಮ್ಮೇಳನ ನಾಳೆಯಿಂದ
ಬೆಂಗಳೂರು: ಕ್ರೈಸ್ಟ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಸೈನ್ಸಸ್ ಮತ್ತು ಭಾಷಾ ವಿಭಾಗದ ವತಿಯಿಂದ ಇದೇ 11 ಮತ್ತು 12ರಂದು ಹೊಸೂರು ರಸ್ತೆಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ‘ವೈಬ್ರಂಟ್ ಅಡ್ವೊಕೆಸಿ ಫಾರ್ ಅಡ್ವಾನ್ಸ್‌ಮೆಂಟ್ ಆ್ಯಂಡ್ ನರ್ಚರಿಂಗ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್’ ಶೀರ್ಷಿಕೆಯಡಿ ರಾಷ್ಟ್ರೀಯ ಸಮ್ಮೇಳನ
ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನವು ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ಸಂಶೋಧನೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಮಾತೃ ಭಾಷೆಗಳ ಮೂಲಕ
ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಆಳವಾದ ಅರಿವು ಪಡೆದುಕೊಳ್ಳುವ ಬಗ್ಗೆ ಚರ್ಚಿಸಲಾಗುತ್ತದೆ.
ಸುಸ್ಥಿರತೆ, ಕೃತಕ ಬುದ್ಧಿಮತ್ತೆ (ಎಐ), ನವೀಕೃತ ಶಕ್ತಿ, ಹವಾಮಾನ ಬದಲಾವಣೆ, ಕ್ವಾಂಟಂ
ತಂತ್ರಜ್ಞಾನಗಳು ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಬಂಧ ಮಂಡನೆ ಮತ್ತು ಚರ್ಚೆಗಳು ನಡೆಯಲಿವೆ.
ಈ ಸಮ್ಮೇಳನವನ್ನು ಕ್ರೈಸ್ಟ್
ವಿಶ್ವವಿದ್ಯಾಲಯದ ಕುಲಸಚಿವ ಅನಿಲ್ ಜೋಸೆಫ್ ಪಿಂಟೊ ಉದ್ಘಾಟಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್ ವತಿಯಿಂದ 2025ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ಜೈನಾಲಜಿ, ಪ್ರಾಕೃತ, ಜೈನಾಗಮ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ, ಮಹಾಪುರಾಣದಲ್ಲಿ ಅಂತರ್ಗತ ವಿಭಿನ್ನ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ, ಕನ್ನಡ, ಸಂಸ್ಕೃತ, ಪ್ರಾಕೃತ ವಿಷಯಗಳಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿರುವ ಹಾಗೂ ಸಂಗೀತ, ಭಜನೆ, ಜಿನಭಕ್ತಿ ಗೀತಗಾಯನ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಇದೇ 20ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಟ್ರಸ್ಟ್‌ನ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ಪ್ರ ಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ: ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್, ಶಾಂತಿ, 369, 42ನೇ ಅಡ್ಡರಸ್ತೆ, ಜಯನಗರ, 8ನೇ ಬ್ಲಾಕ್, ಬೆಂಗಳೂರು.
ಮಾಹಿತಿಗೆ: 88844 15109.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.