ADVERTISEMENT

ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ: ಜನರ ನಿರೀಕ್ಷೆಗಳೇನು?

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 18:53 IST
Last Updated 11 ಸೆಪ್ಟೆಂಬರ್ 2020, 18:53 IST
ಗೌರವ್ ಗುಪ್ತ ಅಧಿಕಾರ ವಹಿಸಿಕೊಂಡ ಸಂದರ್ಭ
ಗೌರವ್ ಗುಪ್ತ ಅಧಿಕಾರ ವಹಿಸಿಕೊಂಡ ಸಂದರ್ಭ    

ಬೆಂಗಳೂರು: ಬಿಬಿಎಂಪಿಯ ಚುನಾಯಿತ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಸರ್ಕಾರ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಚುನಾಯಿತ ಸದಸ್ಯರು ಇಲ್ಲದ ಈ ಅವಧಿಯಲ್ಲಿ ಜನರು ಅಧಿಕಾರಿಗಳಿಂದ ಬಯಸುವ ಆಡಳಿತ ಎಂಥಹದ್ದು. ತಮ್ಮ ಪ್ರದೇಶದ ಸಮಸ್ಯೆಗಳಿಗೆ ಹಾಗೂ ಅಹವಾಲುಗಳಿಗೆ ಅಧಿಕಾರಿಗಳು ಹೇಗೆ ಸ್ಪಂದಿಸಬೇಕು ಎಂದು ಜನ ಬಯಸುತ್ತಾರೆ ಎಂಬ ಬಗ್ಗೆ 'ಪ್ರಜಾವಾಣಿ' ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಇದಕ್ಕೆ ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಇಲ್ಲಿವೆ.

‘ರಸ್ತೆ-ಗುಂಡಿಗಳನ್ನು ಸರಿಪಡಿಸಿ’

ಪಾಲಿಕೆಗೆ ಹೊಸದಾಗಿ ಸೇರಿಸಿರುವ 110 ಹಳ್ಳಿಗಳ ಅಭಿವೃದ್ಧಿಯ ಕಡೆಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಈ ಭಾಗಗಳಲ್ಲಿ ಕಾವೇರಿ ನೀರು ಸರಬರಾಜು ಕೊಳವೆ ಅಳವಡಿಸಲು ರಸ್ತೆಗಳನ್ನು ಹಾಳು ಮಾಡಿದ್ದಾರೆ. ರಸ್ತೆಗುಂಡಿಗಳಿಂದ ಜನರು ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಧಿಕಾರಿಗಳು ಮೊದಲು ಈ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಲಿ

ADVERTISEMENT

-ಜಿ.ಕುಮಾರ್, ಸಿದ್ದೇಶ್ವರ ಬಡಾವಣೆ

‘ಸಮಸ್ಯೆಗಳಿಗೆ ಸ್ಪಂದಿಸಲಿ’

ಕಸ, ರಸ್ತೆ ಗುಂಡಿ, ಸೊಳ್ಳೆಗಳ ಹಾವಳಿ ಹಾಗೂ ಪಾಲಿಕೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಸಮಸ್ಯೆಗಳನ್ನು ಕುರಿತು ಈ ಹಿಂದೆ ಆಡಳಿತಾಧಿಕಾರಿ ಆಗಿದ್ದವರಿಗೆ ಸಂದೇಶ ಕಳುಹಿಸಿದ್ದೆ. ಅವರು ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅದೇ ಕಾರ್ಯವೈಖರಿಯನ್ನು ಈಗಿನ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರಿಂದ ನಿರೀಕ್ಷಿಸುತ್ತೇವೆ.

- ಎಸ್.ಪ್ರಭಾಕರ್, ಚಾಮರಾಜಪೇಟೆ

‘ಮಳೆ ಹಾನಿಯಿಂದ ರಕ್ಷಿಸಿ’

ಮಳೆ ಬಂತೆಂದರೆ ಬೆಂಗಳೂರಿನ ಜನ ಜಲಕಂಟಕದಲ್ಲಿ ಸಿಲುಕುತ್ತಾರೆ. ಈ ವೇಳೆ ಆಸ್ತಿಪಾಸ್ತಿ ಹಾನಿಯಾಗುತ್ತದೆ. ಇದಕ್ಕೆಲ್ಲ ಮೂಲ ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯನ್ನು ಪಾಲಿಕೆ ಕೂಡಲೇ ತೆರವು ಮಾಡಬೇಕು. ಮಳೆ ಬಂದರೂ ನಗರದ ಜನ ನಿಶ್ಚಿಂತರಾಗಿರುವ ದಿನಗಳು ಬರಲಿ.

- ಸಿದ್ರಾಮಯ್ಯ ಮಠದ್, ಬೆಂಗಳೂರು

‘ಕೊರೊನಾ: ಧೈರ್ಯ ಮೂಡಿಸಿ’

ಕೊರೊನಾ ಪರೀಕ್ಷೆಗೆ ಜನ ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪರೀಕ್ಷೆಯ ಫಲಿತಾಂಶ ನೀಡುವಲ್ಲಿ ಎಡವಟ್ಟು, ಚಿಕಿತ್ಸಾ ಕೇಂದ್ರಗಳ ಅವ್ಯವಸ್ಥೆ ಹಾಗೂ ಲೋಪಗಳ ಕಾರಣದಿಂದ ಜನ ಹಿಂದೇಟು ಹಾಕುತ್ತಿದ್ದಾರೆ. ಜನ ರೋಗಕ್ಕಿಂತ ಅವ್ಯವಸ್ಥೆಗಳಿಗೆ ಭಯಪಡುತ್ತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ನೀಡುವ ವ್ಯವಸ್ಥೆಗಳನ್ನು ಕಲ್ಪಿಸಬೇಕು.

- ಕೆ.ಪ್ರಭಾಕರ, ತಲಕಾವೇರಿ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.